
ತೇರದಾಳ: ‘ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳು ಪೂರ್ಣ ಪ್ರಮಾಣದಲ್ಲಿ ಮಹಿಳೆಯರಿಗೆ ದೊರೆತಿಲ್ಲ. ಈಗಿರುವ ಅವಕಾಶಗಳನ್ನು ಬಳಸಿಕೊಂಡು ಮಹಿಳೆ ಸಮಾನತೆ ಪಡೆಯಬೇಕಿದೆ’ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.
ನಗರದ ಸಿದ್ಧೇಶ್ವರ ಶಾಲೆಯ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಜರುಗಿದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬಾಲ್ಯ ವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳು ಮಹಿಳೆಯರ ಬದುಕಿಗೆ ಮುಳ್ಳಾಗಿವೆ. ಅವುಗಳನ್ನು ತಡೆಗಟ್ಟಲು ಸರ್ಕಾರದೊಂದಿಗೆ ಎಲ್ಲರೂ ಸಹಕರಿಸಬೇಕು. ಅಂತಹ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ಇಲಾಖೆಗೆ, ಪೊಲೀಸರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ ತಿಳಿಸುವ ಮೂಲಕ ಸಮಾಜದ ಉತ್ತಮ ಬೆಳವಣಿಗೆಗೆ ಸಹಕರಿಸಬೇಕು’ ಎಂದರು.
ಪಿಎಸ್ಐ ಶಿವಾನಂದ ಸಿಂಗನ್ನವರ ಮಾತನಾಡಿ, ‘ಮಕ್ಕಳಿಗೆ ಲಿಂಗಭೇದವಿಲ್ಲದೆ ಸಮಾನತೆ ತತ್ವದಡಿಯಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ, ಅಪರಾಧಿ ಮನೋಭಾವದಿಂದ ದೂರ ಉಳಿದು, ಉತ್ತಮ ಸಮಾಜ ಹಾಗೂ ಉತ್ತಮ ವೈಯಕ್ತಿಕ ಬದುಕು ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಿಆರ್‌ಪಿ ಅನಂತರಾಜು ಮುಧೋಳ, ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಕೆ.ಎಸ್. ವಸ್ತ್ರದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಎಸ್.ಎಸ್. ಚೆನ್ನಿ, ವಕೀಲ ಎಂ.ಡಿ. ಜೀರಗಾಳ ಮಾತನಾಡಿದರು.
ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಮಹೇಶ ಯಾದವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು. ಹೆಣ್ಣು ಮಕ್ಕಳ ದಿನೋತ್ಸವದ ಅಂಗವಾಗಿ ಶಾಲಾವರಣದಲ್ಲಿ ಸಸಿಗಳನ್ನು ನೆಟ್ಟು, ಸಮೃದ್ಧವಾಗಿ ಬೆಳೆಸುವ ಪಣ ತೊಡಲಾಯಿತು. ತೇರದಾಳ ವಲಯದ ಅಂಗನವಾಡಿ ಮೇಲ್ವಿಚಾರಕಿ ಎ.ಎಸ್. ಕರಿಗಾರ ಸ್ವಾಗತಿಸಿದರು. ಮುಖ್ಯಶಿಕ್ಷಕ ಬಿ.ಟಿ. ಪತ್ತಾರ ಪ್ರತಿಜ್ಞಾವಿಧಿ ಬೋಧಿಸಿ, ಕಾರ್ಯಕ್ರಮ ನಿರ್ವಹಿಸಿದರು. ಎಎಸ್ಐ ಲಕ್ಷ್ಮಣ ಇಮ್ಮಡಿ ಶಿಕ್ಷಕರು, ವಲಯದ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.