
ತೇರದಾಳ: ಶಾಲೆಗಳು ನೈಜ ದೇವಸ್ಥಾನಗಳಿದ್ದಂತೆ. ದೇವಸ್ಥಾನದ ಹುಂಡಿಗಳಿಗೆ ಹಾಕಿದ ಕಾಣಿಕೆ ಕಳ್ಳತನವಾಗಬಹುದು ಇಲ್ಲವೇ ದುರುಪಯೋಗವಾಗಬಹುದು ಆದರೆ ಸರ್ಕಾರಿ ಶಾಲೆಗಳಿಗೆ ನೀಡಿದ ಕಾಣಿಕೆ, ದಾನ ವ್ಯರ್ಥವಾಗದು. ಹಾಗಾಗಿ ಶಾಲೆಗಳಿಗೆ ಧಾರಾಳವಾಗಿ ದಾನ ಮಾಡಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಿಸಲಾದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಖಾಸಗೀ ಶಾಲೆಗಳೊಂದಿಗೆ ಪೈಪೋಟಿಗಿಳಿಯಲು ಹಿಂದೇಟು ಹಾಕಬೇಡಿ. ಇದರಿಂದ ಬಡವರ ಮಕ್ಕಳ ಸೇವೆಗೈದ ಪುಣ್ಯ ಲಭಿಸಲಿದೆ. ಪಟ್ಟಣಕ್ಕೆ ಈಗ ಅವಶ್ಯವಿರುವ ಸರ್ಕಾರಿ ಪಿಯು ಕಾಲೇಜು ಮಂಜೂರಿಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಹಾಗೂ ಸದನದಲ್ಲೂ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಇಒ ಅಶೋಕ ಬಸಣ್ಣವರ, ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ ಜಿಲ್ಲೆಯ ಏಕೈಕ ಪ್ರೌಢಶಾಲೆಯಾಗಿ ತೇರದಾಳದ್ದು ಮಂಜೂರಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಮಾತನಾಡಿ, ಪಟ್ಟಣದಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆ ಇಲ್ಲದ್ದರಿಂದ ಬಹಳಷ್ಟು ಬಡ ಮಕ್ಕಳು ಅದರಲ್ಲೂ ಬಾಲಕಿಯರು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗಿದ್ದು ಮಾತ್ರವಲ್ಲದೆ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗಿಗೂ ಗುರಿಯಾಗಿದ್ದರು. ಇಲ್ಲಿ ತಾಲ್ಲೂಕಿಗಾಗಿ ಹೋರಾಟ ನಡೆಯಿತು, ಆದರೆ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೌಢಶಾಲೆ ಬೇಕು ಎಂಬ ಹೋರಾಟ ನಡೆಯದಿರುವುದು ವಿಪರ್ಯಾಸ. ಬಹಳ ದಿನಗಳ ನಂತರ ಪ್ರೌಢಶಾಲೆ ದೊರಕಿದ್ದು ಸಂತಸ ಎಂದರು.
ಹಲವರು ಪ್ರೌಢಶಾಲೆ ಮಕ್ಕಳಿಗೆ ಸಮವಸ್ತ್ರ, ಟ್ರ್ಯಾಕಸೂಟ್, ಶಾಲಾ ಬ್ಯಾಗ್, ಸೇರಿದಂತೆ ಆರಂಭಕ್ಕೆ ಅವಶ್ಯವಿರುವ ವಸ್ತುಗಳನ್ನು ಕಾಣಿಕೆಯಾಗಿ ನೀಡಿದರೆ, ಇಲ್ಲಿ ದಾಖಲಾಗುವ ಮಕ್ಕಳು ಶಾಲೆಗೆ ಬರಲು ಕೆಲವರು ಆಟೊ ಬಾಡಿಗೆ ಭರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು, ಇನ್ನೂ ಕೆಲವು ದಾನಿಗಳು ಕಂಪ್ಯೂಟರ್, ಪ್ರಿಂಟರ್ ನೀಡಲು ಮುಂದೆ ಬಂದರು. ಹಿರೇಮಠದ ಗಂಗಾಧರ ದೇವರು ಸಾನಿಧ್ಯ ವಹಿಸಿದ್ದರು. ಅಕ್ಷರ ದಾಸೋಹ ಕಾರ್ಯಕ್ರಮದ ಅಧಿಕಾರಿ ಸಿ.ಎಸ್.ಕಲ್ಯಾಣಿ, ಪುರಸಭೆ ಉಪಾಧ್ಯಕ್ಷೆ ನಸ್ರೀನಬಾನು ರಾಜೇಸಾಬ, ಮುಖ್ಯಗುರುಮಾತೆ ಎಮ್.ಎಸ್. ಜಿಟ್ಟಿ, ಉಪತಹಶೀಲ್ದಾರ್ ಸಂಗಮೇಶ ಕಾಗಿ, ಶಿಕ್ಷಣ ಇಲಾಖೆಯ ಸಂಗಮೇಶ ವಿಜಾಪೂರ, ಬಿ.ಎಂ.ಹಳೇಮನಿ, ಮಹೇಶ ಸೋರಗಾಂವಿ, ಎ.ಆರ್.ಮುಧೋಳ ಸೇರಿದಂತೆ ಶಿಕ್ಷಕರು, ಗಣ್ಯರು, ದಾನಿಗಳು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.