ADVERTISEMENT

ರನ್ನ ವೈಭವ‌ | ರನ್ನನ ಕಾವ್ಯ ಕಬ್ಬಿನ ಸಿಹಿಯಂತೆ: ಕುಂದರಗಿ

ರನ್ನ ವೈಭವ: ರನ್ನ ರಸಾಯನ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 13:52 IST
Last Updated 23 ಫೆಬ್ರುವರಿ 2025, 13:52 IST
<div class="paragraphs"><p>ಮುಧೋಳದ ರನ್ನ ವೈಭವದ ಅಂಗವಾಗಿ ನಗರದ ರನ್ನ ಸಂಸ್ಕೃತಿಕ ಭವನದ ಅಜಿತಸೇನಾಚಾರ್ಯ ವೇದಿಕೆಯಲ್ಲಿ ಭಾನುವಾರ ವಿಚಾರಗೋಷ್ಠಿ ನಡೆಯಿತು</p></div>

ಮುಧೋಳದ ರನ್ನ ವೈಭವದ ಅಂಗವಾಗಿ ನಗರದ ರನ್ನ ಸಂಸ್ಕೃತಿಕ ಭವನದ ಅಜಿತಸೇನಾಚಾರ್ಯ ವೇದಿಕೆಯಲ್ಲಿ ಭಾನುವಾರ ವಿಚಾರಗೋಷ್ಠಿ ನಡೆಯಿತು

   

ಮುಧೋಳ (ಅಜಿತಸೇನಾಚಾರ್ಯ ವೇದಿಕೆ): ‘ರನ್ನನ ಕಾವ್ಯ ಓದುಗರಿಗೆ ಕಬ್ಬಿನ ಸಿಹಿ ಉಣಬಡಿಸುತ್ತದೆ. ಕಬ್ಬು ತಿನ್ನಲು ಕಠಿಣ. ಆದರೆ ಸಿಪ್ಪೆ ಸುಲಿದಂತೆ ಮಧುರ ಸಿಹಿ ದೊರೆಯುತ್ತದೆ. ಅದೇ ರೀತಿ ಹಳಗನ್ನಡಲ್ಲಿರುವ ರನ್ನ ಕವನ ಓದಲು ಕಷ್ಟವೆನಿಸಿದರೂ ಅರ್ಥೈಸಿಕೊಂಡರೆ ಕಾವ್ಯದ ಹಿತಾನುಭವವಾಗುವುದು’ ಎಂದು ಹಿರಿಯ ಪತ್ರಕರ್ತ ಸುಶೀಲೇಂದ್ರಾಚಾರ್ಯ ಕುಂದರಗಿ ಹೇಳಿದರು.

ರನ್ನ ವೈಭವದ ಅಂಗವಾಗಿ ನಗರದ ರನ್ನ ಸಂಸ್ಕೃತಿಕ ಭವನದ ಅಜಿತಸೇನಾಚಾರ್ಯ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ‘ರನ್ನ ರಸಾಯನ’ ಕುರಿತು ಮಾತನಾಡಿದರು.

ADVERTISEMENT

‘ಗಧಾಯುದ್ಧ ಕೃತಿಯಲ್ಲಿ ಎಲ್ಲ ಪ್ರಕಾರದ ರಸಗಳನ್ನು ಮೇಳೈಸುವ ಮೂಲಕ ಷೇಕ್ಸ್‌ಪೀಯರ್‌ನಿಗಿಂತ ನೂರಾರು ವರ್ಷಗಳ ಮುಂಚೆಯೇ ನಾಟಕ ರಚಿಸಿದ ಕೀರ್ತಿ‌ ರನ್ನನಿಗೆ ಸಲ್ಲುತ್ತದೆ‌. ಆದ್ದರಿಂದ ಪ್ರಪಂಚದ ಮೊಟ್ಟ ಮೊದಲ ನಾಟಕಕರಾ ರನ್ನ’ ಎಂದು ತಿಳಿಸಿದರು.

‘ಸ್ಥಳೀಯ ಕಲಾವಿದರ ನೆರವಿನಿಂದ ರನ್ನನ ಕಾವ್ಯಾನುಸಂಧಾನ ಕಾರ್ಯಕ್ಕೆ‌‌ ಮುಂದಾಗುವುದರಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನೆಲೆ ರನ್ನ ಪ್ರತಿಷ್ಠಾನ ಕಾರ್ಯೋನ್ಮುಖವಾಗಬೇಕು’ ಎಂದು ಹೇಳಿದರು.

ಅಜಿತನಾಥ ಪುರಾಣದ ಚಾರಿತ್ರಿಕ ಅಂಶಗಳ ಕುರಿತು ಉಪನ್ಯಾಸ ನೀಡಿದ ಅಪ್ಪಣ್ಣ ಹಂಜೆ, ‘ರನ್ನನ ಕೃತಿ ಅಧ್ಯಯನಕ್ಕೂ ಮುನ್ನ ಆತನ ಹಿನ್ನೆಲೆ ಅರಿತುಕೊಂಡರೆ ಕೃತಿಯಲ್ಲಿನ ಅಂಶಗಳನ್ನು ಪರಿಪೂರ್ಣವಾಗಿ ಅರಿತುಕೊಳ್ಳಲು ನೆರವಾಗುತ್ತದೆ. ಕವಿ ಹಾಗೂ ಕಾವ್ಯದ ಪೂರ್ವಾಪರ‌ ಮಾಹಿತಿ ಅರಿತುಕೊಳ್ಳುವ ಕೆಲಸವಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ.ಎಸ್. ಮಾಳಿ, ‘ಸರ್ವರನ್ನೂ ಸಹೃದಯದಿಂದ ಅಪ್ಪಿಕೊಂಡು, ಒಪ್ಪಿಕೊಳ್ಳುವ ಮನೋಭಾವ ಹೊಂದಿದ್ದ ರನ್ನ ಅನನ್ಯತೆಯಿರುವ ಆಪ್ತತೆಯ ಕವಿಯಾಗಿದ್ದಾನೆ. ಅತ್ತಿಮಬ್ಬೆಯ ಚರಿತ್ರೆ ರಚಿಸಿ ಮೊಟ್ಟ ಮೊದಲ ಸ್ತ್ರೀವಾದಿ ಕವಿಯೆನಿಸಿಕೊಂಡಿರುವ ರನ್ನ ತನ್ನ ಕಾವ್ಯದ ಮೂಲಕ ಜೀವನದಲ್ಲಿ ಸೋತವರನ್ನು ಕೈಹಿಡಿದು ಮೇಲಕ್ಕೆತ್ತುವ ಕಾರ್ಯ ಮಾಡಿದ್ದಾನೆ’ ಎಂದರು.

ರೂಗಿ ಅಡವಿ ಆಶ್ರಮದ ನಿತ್ಯಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಜಾನಕಿ. ಕೆ.ಎಂ., ಹಿರಿಯ ಸಾಹಿತಿ ಶಿವಾನಂದ ಕುಬಸದ, ಕಸಾಪ ತಾಲ್ಲೂಕು ಅಧ್ಯಕ್ಷ ಆನಂದ ಪೂಜಾರಿ, ಬಿಇಒ ಎಸ್.ಎಂ. ಮುಲ್ಲಾ ಇದ್ದರು.

ಸಾರ್ವತ್ರಿಕ ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ರನ್ನನ ಕಾವ್ಯಗಳ ಕುರಿತು ಇಂದಿನ ಕಾಲಘಟ್ಟದಲ್ಲಿ ಚರ್ಚೆ ನಡೆಸಬೇಕಾಗಿದೆ
ಯಲ್ಲಪ್ಪ ಯಾಕೊಳ್ಳಿ ಸಾಹಿತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.