ADVERTISEMENT

ತಿಮ್ಮಾಪುರ ವಿರುದ್ಧ ತನಿಖೆಗೆ ಆಗ್ರಹ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 14:49 IST
Last Updated 12 ಏಪ್ರಿಲ್ 2025, 14:49 IST
ಪಿ. ರಾಜೀವ್ 
ಪಿ. ರಾಜೀವ್    

ಬಾಗಲಕೋಟೆ: ‘ಮದ್ಯ ಮಾರಾಟದ ಲೈಸನ್ಸ್‌ (ಪರವಾನಗಿ)ಗಳಲ್ಲಿ ಪಾಲುದಾರಿಕೆ ಪಡೆಯುವ ಕೆಲಸದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಅವರ ಕುಟುಂಬ ನಿರತವಾಗಿದ್ದು, ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದ್ಯ ಮಾರಾಟದ ಪರವಾನಗಿ ನೀಡಲು ಲಂಚದ ದರ ನಿಗದಿಪಡಿಸಲಾಗಿದೆ. ಬಾರ್‌ ಆ್ಯಂಡ್‌ ರೆಸ್ಟೊರೆಂಟ್ ಸೇರಿದಂತೆ ವಿವಿಧ ಪರವಾನಗಿಗಳಿಗೆ ವಿವಿಧ ದರ ನಿಗದಿ ಮಾಡಲಾಗಿದೆ’ ಎಂದು ಪ್ರಶ್ನಿಸಿದರು.

‘ದೆಹಲಿ ಅಬಕಾರಿ ಹಗರಣಕ್ಕಿಂತ ಮೂರು ಪಟ್ಟು ಹೆಚ್ಚು ಹಣ ವರ್ಗಾವಣೆಯಾಗಿದೆ. ಮಾಹಿತಿ ಇದ್ದರೂ ಮುಖ್ಯಮಂತ್ರಿ ಕ್ರಮಕೈಗೊಳ್ಳುತ್ತಿಲ್ಲ. ಸಚಿವ ತಿಮ್ಮಾಪುರ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಹಾಗೆ ಮಾಡದಿದ್ದರೆ, ನೀವು ಪಾಲುದಾರರಾಗಿದ್ದೀರಿ ಎಂದು ಜನರು ಅರ್ಥವಾಗುತ್ತದೆ’ ಎಂದರು.

ADVERTISEMENT

‘ಸಚಿವರು ಹೇಳಿದ ಕೆಲಸ ಮಾಡಲಿಲ್ಲ ಎಂದು ಡೆಪ್ಯುಟಿ ಡೈರಕ್ಟರ್‌ ವರ್ಗಾವಣೆ ಮಾಡಲಾಗಿದ್ದು, ಪೋಸ್ಟಿಂಗ್‌ ನೀಡಿಲ್ಲ. ಅಬಕಾರಿ ಇನ್‌ಸ್ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಅಮಾನತು ಪತ್ರವನ್ನು ಹಿಡಿದುಕೊಂಡು ತಿರುಗಾಡುತ್ತಿರುವ ಸಚಿವರ ಪುತ್ರ ವಿನಯ್‌ ತಿಮ್ಮಾಪುರ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಬಕಾರಿ ಸಚಿವರ ಭ್ರಷ್ಟಾಚಾರ ಗೊತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಸಚಿವ ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಎಸ್‌ಐಟಿಗೆ ನೀಡಿದರೆ, ಕ್ಲೀನ್‌ ಚಿಟ್‌ ನೀಡುತ್ತಾರೆ. ಆದ್ದರಿಂದ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ದುರಾಡಳಿತ, ಬೆಲೆ ಏರಿಕೆ ಖಂಡಿಸಿ ಏ.17 ರಂದು ಬಾಗಲಕೋಟೆಯಲ್ಲಿ ಜನಾಕ್ರೋಶ ರ‍್ಯಾಲಿ ನಡೆಸಲಾಗುವುದು’ ಎಂದು ಹೇಳಿದರು.

‘ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವ ಬಗ್ಗೆ ಪತ್ರ ಬರೆದರೆ ಸಾಲದು. ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಬೇಕು. ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದರು.

ಶಾಸಕ ಜಗದೀಶ ಗುಡಗುಂಟಿ, ಶಾಂತಗೌಡ ಪಾಟೀಲ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ, ವಿಜಯಲಕ್ಷ್ಮಿ ತುಂಗಳ ಇದ್ದರು.

ಜಿಲ್ಲೆಗೆ ನಿಮ್ಮ ಕೊಡುಗೆ ಏನು?

ಬಾಗಲಕೋಟೆ: ‘ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ತಂದಿದ್ದೀರಿ? ವಸತಿ ರಹಿತರಿಗೆ ಒಂದೂ ಮನೆ ಮಂಜೂರು ಮಾಡಿಲ್ಲ. ಭೂರಹಿತರಿಗೆ ಜಮೀನಿ ನೀಡಿಲ್ಲ. ಜಿಲ್ಲೆಗೆ ನಿಮ್ಮ ಕೊಡುಗೆ ಏನು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ‍ಪ್ರಶ್ನಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗಂಗಾಕಲ್ಯಾಣ ಯೋಜನೆಯಲ್ಲಿ ಎಷ್ಟು ಕೊಳವೆಬಾವಿ ಕೊರೆಯಿಸಿದ್ದೀರಿ? ಮಕ್ಕಳಿಗೆ ಎಷ್ಟು ಲ್ಯಾಪ್‌ಟಾಪ್‌ ನೀಡಿರುವಿರಿ? ಎಷ್ಟು ಶಾಲೆ ನಿರ್ಮಾಣ ಮಾಡಲಾಗಿದೆ. ಪದವಿಪೂರ್ವ ಪದವಿ ಕಾಲೇಜು ಎಷ್ಟು ಮಂಜೂರು ಮಾಡಲಾಗಿದೆ’ ಎಂದು ಕೇಳಿದರು. ‘ರಾಜ್ಯದಲ್ಲಿ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಜನರ ಪಾಲಿಗೆ ಶಾಪವಾಗಿದೆ. ರೈತರ ದಲಿತರ ಬಡವರ ತೆರಿಗೆದಾತರ ಪಾಲಿಗೆ ಸಂಕಷ್ಟ ತಂದೊಡ್ಡಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.