ಕುಳಗೇರಿ ಕ್ರಾಸ್: ಗ್ರಾಮದ ರೈತರು ಸೋಮವಾರ ರಸಗೊಬ್ಬರ ಖರೀದಿಸಲು ಪರದಾಡಿದರು. ಇಲ್ಲಿನ ನಾಲ್ಕೈದು ರಸಗೊಬ್ಬರ ಅಂಗಡಿಗಳ ಎದುರು ಸಾಲುಗಟ್ಟಿ ನಿಂತು ರೈತರು ರಸಗೊಬ್ಬರು ಪಡೆದರು.
ಯೂರಿಯಾ ರಸಗೊಬ್ಬರ ಗ್ರಾಮದ ಅಂಗಡಿಗಳಿಗೆ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ರೈತರು ಜಮಾವಣೆಯಾದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದರಿಂದ ವ್ಯಾಪಾರಸ್ಥರ ಜೊತೆ ಮಾತಿನ ಚಕಮಕಿ ನಡೆಯಿತು. ಕೆಲವೆಡೆ ನೂಕುನುಗ್ಗಲು ಉಂಟಾಯಿತು. ಕೆಲಹೊತ್ತು ಯೂರಿಯಾ ರಸಗೊಬ್ಬರವನ್ನು ನೀಡುವುದನ್ನು ಅಂಗಡಿ ವರ್ತಕರು ನಿಲ್ಲಿಸಿ, ಮನೆಗೆ ಹೋದ ಪ್ರಸಂಗ ನಡೆಯಿತು.
ಗ್ರಾಮದ ಪೊಲೀಸ್ ಹೊರ ಠಾಣೆಯ ಮುಂಭಾಗದಲ್ಲಿರುವ ಅಗ್ರೋ ಕೇಂದ್ರದ ಬಳಿ ರಸಗೊಬ್ಬರ ಚೀಟಿಯನ್ನು ನೀಡುವ ಸಮಯದಲ್ಲಿ ನೂಕುನುಗ್ಗಲಾಯಿತು. ಇದರಿಂದಾಗಿ ರಸಗೊಬ್ಬರ ವಿತರಣೆಯನ್ನು ಕೆಲ ಸಮಯದವರೆಗೆ ಸ್ಥಗಿತಗೊಳಿಸಲಾಗಿತ್ತು. ರೈತರ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಪಡಿತರ ಧಾನ್ಯ ಪಡೆಯಲು ಸಾಲಾಗಿ ನಿಲ್ಲುವ ರೀತಿಯಲ್ಲಿ ಮಹಿಳೆಯರು ರಸಗೊಬ್ಬರ ಪಡೆಯಲು ಕೂಡ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು. ಸೋಮನಕೊಪ್ಪ, ಕುಳಗೇರಿ, ಚಿರ್ಲಕೊಪ್ಪ, ಖಾನಾಪುರ ಎಸ್.ಕೆ, ಚಿಮ್ಮನಕಟ್ಟಿ, ಕಾಕನೂರ, ತಪ್ಪಸಕಟ್ಟಿ, ಕಲ್ಲಾಪುರ ಎಸ್.ಕೆ, ಮಮಟಗೇರಿ, ಹನುಮಸಾಗರ, ನೀಲ ಗುಂದ, ತಿಮ್ಮಾಪುರ ಎಸ್.ಎನ್, ನರಸಾಪುರ, ಬಂಕನೇರಿ, ವಡವಟ್ಟಿ, ಬೆಳವಲಕೊಪ್ಪ , ಗೋವನಕೊಪ್ಪ, ಬೀರನೂರ, ತಳಕವಾಡ, ಆಲೂರು ಎಸ್.ಕೆ, ಹಾಗನುರ, ಕರ್ಲಕೊಪ್ಪ, ಕಳಸ, ಕಿತ್ತಲಿ ಸೇರಿದಂತೆ ಕರಡಿಗುಡ್ಡ ಎಸ್.ಎನ್, ಆಲದಕಟ್ಟಿ ಇನ್ನು ಮುಂತಾದ ಗ್ರಾಮಗಳ ರೈತರು ಕೂಡ ಇಲ್ಲಿಗೆ ಆಗಮಿಸಿ, ರಸಗೊಬ್ಬರ ಪಡೆಯಲು ಪ್ರಯತ್ನ ನಡೆಸಿದರು.
‘ಬಿತ್ತನೆ ಸಮಯದಲ್ಲಿ ರೈತರು ರಸಗೊಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಬಿತ್ತನೆ ಮಾಡಿರುವುದೇ ತಪ್ಪು ಎನ್ನುವಂತಾಗಿದೆ ಎಂದು ಸೋಮನಕೊಪ್ಪ ಗ್ರಾಮದ ರೈತ ರಮೇಶ ಮಣ್ಣೂರ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.