ಖಾನಾಪುರ: ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಸ್ಥಳೀಯ ಭಾಷಿಕರಿಗೆ ಪ್ರಾತಿನಿಧ್ಯ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಗಮನಹರಿಸಬೇಕು‘ ಎಂದು ಮರಾಠಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಕಾಪೋಲಕರ ಆಗ್ರಹಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 49 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 84 ಸಹಾಯಕಿಯರ ಹುದ್ದೆಗಳಿಗೆ ಶಿಶು ಅಭಿವೃದ್ಧಿ ಇಲಾಖೆಯಿಂದ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿತಿರಬೇಕು ಎಂದು ತಿಳಿಸಿದ್ದರಿಂದ, ಮರಾಠಿ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ’ ಎಂದು ಹೇಳಿದರು.
‘ತಾಲ್ಲೂಕಿನಲ್ಲಿ ಈವರೆಗೂ ಇಂತಹ ನಿಯಮ ಇರಲಿಲ್ಲ. ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿತವರಿಗೂ ನೇಮಕಾತಿ ಮಾಡಿಕೊಳ್ಳಲಾಗಿದೆ. ಇಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿರುವ ಕಾರಣ ನಿಯಮ ಸಡಿಲಿಸಬೇಕು. ಸ್ಥಳೀಯ ಜನರ ಭಾಷೆ ಹಾಗೂ ಅಂಗನವಾಡಿಗೆ ಬರುವ ಮಕ್ಕಳ ಮಾತೃಭಾಷೆಯನ್ನು ಪರಿಗಣಿಸಿ, ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಈ ಕುರಿತು ಶೀಘ್ರದಲ್ಲೇ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಮರಾಠಿ ಭಾಷಿಕರಿಗೆ ಅನ್ಯಾಯವಾದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ನೀಲಾವಡೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವಿನಾಯಕ ಮುತಗೇಕರ ಎಚ್ಚರಿಸಿದರು.
ಪ್ರಹ್ಲಾದ ಮಾದರ, ರಮೇಶ ಧಬಾಲೆ, ನಾಗೇಶ ಪಾಟೀಲ, ಪ್ರಭು ಕದಂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.