ADVERTISEMENT

ಬಾಗಲಕೋಟೆಗೆ ವಂದೇ ಭಾರತ್ ರೈಲು ಶೀಘ್ರ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 22 ಮೇ 2025, 14:15 IST
Last Updated 22 ಮೇ 2025, 14:15 IST
ಬಾಗಲಕೋಟೆ ರೈಲ್ವೆ ನಿಲ್ದಾಣ ಸೇರಿದಂತೆ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫ್‌ರೆನ್ಸ್ ಮೂಲಕ  ಲೋಕಾರ್ಪಣೆಗೊಳಿಸಿದ್ದನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತಿತರರು ವೀಕ್ಷಿಸಿದರು
ಬಾಗಲಕೋಟೆ ರೈಲ್ವೆ ನಿಲ್ದಾಣ ಸೇರಿದಂತೆ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫ್‌ರೆನ್ಸ್ ಮೂಲಕ  ಲೋಕಾರ್ಪಣೆಗೊಳಿಸಿದ್ದನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತಿತರರು ವೀಕ್ಷಿಸಿದರು   

ಬಾಗಲಕೋಟೆ: ‘ರಾಜ್ಯದ 10 ಮಾರ್ಗಗಳಲ್ಲಿ ವಂದೇ ಬಾರತ್ ರೈಲು ಸಂಚರಿಸುತ್ತಿದ್ದು, ಶೀಘ್ರದಲ್ಲಿ ಬಾಗಲಕೋಟೆಗೂ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೊ ಕಾನ್ಫ್‌ರೆನ್ಸ್ ಮೂಲಕ ಅಮೃತ್ ಭಾರತ ನಿಲ್ದಾಣ ಯೋಜನೆ ಅಡಿ ಪುನರಾಭಿವೃದ್ದಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ ಡಬ್ಲಿಂಗ್‌, ವಿದ್ಯುದ್ದೀಕರಣ, ಎಂಜಿನ್‌ಗಳ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದರು.

‘ರಾಜ್ಯದ ಬಾಗಲಕೋಟೆ, ಮುನಿರಾಬಾದ್, ಗದಗ, ದಾರವಾಡ ಹಾಗೂ ಗೋಕಾಕ ಸೇರಿದ್ದು, ಈ ಭಾಗದ 13ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿಗೆ ₹300 ಕೋಟಿ ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗಿದೆ. ಬಾಗಲಕೋಟೆ-ಕುಡಚಿ, ಗದಗ-ಹುಟಗಿ, ಗದಗ-ವಾಡಿ, ರಾಯಚೂರು-ಗಿಣಿಗೇರಾ ಸೇರಿದಂತೆ 11 ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ₹33 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ‘ನಿಲ್ದಾಣ ಆಧುನೀಕರಣದಿಂದ ಸಿಮೆಂಟ್, ಸಕ್ಕರೆ ಸಾಗಾಟಕ್ಕೆ ಅನುಕೂಲವಾಗಲಿದೆ. ಭೂಸ್ವಾಧೀನ ವಿಳಂಬವಾಗಿದ್ದರಿಂದ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ವಿಳಂಬವಾಗಿದೆ’ ಎಂದರು.

ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ‘ಅದ್ಭುತ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಿರುವುದು ಸಂತಸದ ವಿಷಯ. ಸೂಪರ್ ಫಾಸ್ಟ್ ರೈಲು, ಅಯೋಧ್ಯೆಗೆ ವಾರಕ್ಕೆ ಮೂರು ರೈಲು, ರಾಜಸ್ಥಾನ, ಗುಜರಾತ್ ವ್ಯಾಪಾರಿಗಳ ಅನುಕೂಲಕ್ಕೆ ರೈಲು ಸೇವೆ, ಜನಶತಾಬ್ದಿ ರೈಲಿನ ಸಂಚಾರವನ್ನು ಬಾಗಲಕೋಟೆವರೆಗೂ ವಿಸ್ತರಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ‘ಕುಡಚಿ–ಬಾಗಲಕೋಟೆ ರೈಲು ಮಾರ್ಗ ನಿರ್ಮಾಣವನ್ನು ಬೇಗ ಪೂರ್ಣಗೊಳಿಸಬೇಕು. ನಿಲ್ದಾಣ ಹಾಗೂ ರೈಲ್ವೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಉಪಾದ್ಯಕ್ಷೆ ಶೋಭಾ ರಾವ್, ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕಿ ಬೀಲಾ ಮೀನಾ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ರೈಲ್ವೆ ನಿಲ್ದಾಣದ ಅರವಿಂದ ಹೆರ್ಲೇ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.