ADVERTISEMENT

ಬಾಗಲಕೋಟೆ | ವೀರಶೈವ ಲಿಂಗಾಯತ ಒಡೆದಿದ್ದಕ್ಕಾಗಿ ವಿರೋಧ: ವೀರಣ್ಣ ಚರಂತಿಮಠ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 3:11 IST
Last Updated 17 ಅಕ್ಟೋಬರ್ 2025, 3:11 IST
<div class="paragraphs"><p>ವೀರಣ್ಣ ಚರಂತಿಮಠ</p></div>

ವೀರಣ್ಣ ಚರಂತಿಮಠ

   

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಒಡೆಯುವ ಕೆಲಸ ಮಾಡುತ್ತಾರೆ. ಆ ಕಾರಣಕ್ಕೆ ವಿರೋಧ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ‘ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ ಆದರೂ ವಿರೋಧ ಏಕೆ’ ಎಂದು ಮುಖ್ಯಮಂತ್ರಿ ಕೇಳಿದ್ದಾರಲ್ಲ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಅವರು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ದೊಡ್ಡ ಸಾಧನೆ ಏನಲ್ಲ. ಅವರನ್ನು ಮಹಾತ್ಮ ಬಸವಣ್ಣ ಎಂದು ಕರೆಯುತ್ತೇವೆ. ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದು ನಿಜ. ಆದರೆ, ಅದರ ಹಿಂದಿನ ಉದ್ದೇಶ ಸರಿ ಇಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

‘ದೇವರಾಜ ಅರಸು ಆಡಳಿತದಲ್ಲಿ ವೀರಶೈವ ಲಿಂಗಾಯತರಲ್ಲಿ ಎಷ್ಟೊಂದು ಒಳಪಂಗಡಗಳಿವೆ ಎಂದು ಗೊತ್ತಾಯಿತು. ಯಾವುದೇ ವಿಚಾರ ಮಾಡದೇ ತರಾತುರಿಯಲ್ಲಿ ಹಾವನೂರ ಆಯೋಗ ಮಾಡಿದಾಗಿನಿಂದ ಸಮಸ್ಯೆ ಶುರುವಾಯಿತು. ಇವತ್ತಿಗೂ ನಿಂತಿಲ್ಲ’ ಎಂದು ಟೀಕಿಸಿದರು.

‘ಕೆಲವರು ಮೀಸಲಾತಿ ಸೌಲಭ್ಯಕ್ಕಾಗಿ ಮನಸ್ಥಿತಿ ಬದಲಾಯಿಸಿಕೊಂಡಿದ್ದರೂ ವೀರಶೈವ ಲಿಂಗಾಯತ ಜೀನ್ಸ್ ಎಂದು ಇದ್ದೇ ಇರುತ್ತದೆ. ಸಾಂಸ್ಕೃತಿಕವಾಗಿ ನಾವು ಒಂದೇ ಇದ್ದೇವೆ. ಉದ್ಯೋಗದ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳು ಬಂದಿವೆ ಅಷ್ಟೇ’ ಎಂದರು.

‘ಸಮಾಜವನ್ನು ಒಡೆಯಲು ಯಾರೆಲ್ಲ ಪ್ರಯತ್ನ ಮಾಡಿದ್ದಾರೋ ಅವರಿಗೆ ಒಳ್ಳೆಯದು ಆಗಿಲ್ಲ. ದೇವರಾಜ ಅರಸು ಅವರ ಪರಿಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರಿಗೂ ಒಳ್ಳೆಯದು ಮಾಡಬೇಕು ಎನ್ನುವುದಿಲ್ಲ’ ಎಂದು ಹೇಳಿದರು.

ಆರ್‌ಎಸ್‌ಎಸ್‌ ನಿಷೇಧ ಮಾಡಲಾಗಲ್ಲ

ರಾಜ್ಯದಲ್ಲಿ ಆರ್‌ಎಸ್‍ಎಸ್ ನಿಷೇಧ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಮಾತ್ರವಲ್ಲದೇ ಹೊರದೇಶಗಳಲ್ಲೂ ಸಂಘದ ಚಟುವಟಿಕೆಗಳು ನಡೆದಿವೆ. ಕೆಲವರು ಬಾಯಿ ಚಪಲಕ್ಕೆ ಏನೇನೋ ಮಾತನಾಡುತ್ತಾರೆ. ಆರ್‌ಎಸ್‍ಎಸ್ ದೇಶಭಕ್ತರ ಸಂಘಟನೆ. ಅನೇಕ ಅಂಗ ಸಂಸ್ಥೆಗಳಿದ್ದು, ಬಿಜೆಪಿಯೂ ಅದರಲ್ಲಿ ಒಂದು ಎಂದರೆ ತಪ್ಪಾಗಲ್ಲ ಎಂದರು.

‘ತಮ್ಮ ಹುಳುಕು ಹಾಗೂ ಗೊಂದಲ ಮುಚ್ಚಿಕೊಳ್ಳಲು, ಮತಗಳ್ಳತನ ಆರೋಪ ಮಾಡಲಾಗುತ್ತಿದೆ. 60 ವರ್ಷ ಆಡಳಿತ ನಡೆಸಿದಾಗ ಕಾಂಗ್ರೆಸ್‌ ಮತಗಳ್ಳತನ ನಡೆಸಿಯೇ ಅಧಿಕಾರಕ್ಕೆ ಬಂದಿತ್ತಾ? ರಾಹುಲ್‌ ಗಾಂಧಿ ವಿಪಕ್ಷ ನಾಯಕ, ಕಾಂಗ್ರೆಸ್‌ಗೆ ಅವಮಾನವಾಗುವಂತೆ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಬೆದರಿಕೆ ಹಾಕಿದ್ದಾರೆ ಎಂದು ಪ್ರಚಾರ ಪಡೆಯುವ ಬದಲು ತಮ್ಮದೇ ಸರ್ಕಾರವಿದೆ. ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಸರ್ಕಾರದ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಹೊಸ, ಹೊಸ ವರಸೆ ತೆಗೆಯುತ್ತಿರುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.