ADVERTISEMENT

ಬಾಗಲಕೋಟೆ | ಕೃಷಿ-ಖುಷಿ: ತರಕಾರಿಯಲ್ಲೇ 'ಸಂತೃಪ್ತಿಯ' ಬದುಕು ಕಟ್ಟಿಕೊಂಡ ಸಲಬಣ್ಣ!

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:03 IST
Last Updated 21 ನವೆಂಬರ್ 2025, 8:03 IST
ಬದನೆಕಾಯಿ
ಬದನೆಕಾಯಿ   

ರಾಂಪುರ: ಕೃಷಿಯಲ್ಲಿ ಲಾಭವೇ ಬಾರದ ಇಂದಿನ ದಿನಗಳಲ್ಲಿ ಅತಿ ಸಣ್ಣ ರೈತರು ಕಾಯಿಪಲ್ಲೆ(ತರಕಾರಿ) ಬೆಳೆಯುವ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ.

ಎಕರೆ, ಅರ್ಧ ಎಕರೆ ಜಮೀನು ಹೊಂದಿರುವ ರೈತರು ಕೃಷಿ ಬೆಳೆಗಳನ್ನು ಬೆಳೆದು ಸೂಕ್ತ ಬೆಲೆ ದೊರೆಯದೇ ಕೈಸುಟ್ಟು ಕೊಳ್ಳುವುದು ಬೇಡ, ಇರುವ ಜಮೀನಿನಲ್ಲೇ ತರಕಾರಿ ಬೆಳೆದು ಒಂದಿಷ್ಟು ಲಾಭ ಗಳಿಸಿ ಸಂತೃಪ್ತ ಜೀವನ ನಡೆಸುವ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಮನ್ನಿಕಟ್ಟಿ ಗ್ರಾಮದ ಅತಿ ಸಣ್ಣ ರೈತ ಸಲಬಣ್ಣ ತಿಮ್ಮಾಪುರ ಕಳೆದ 15 ವರ್ಷಗಳಿಂದ ತರಕಾರಿ ಬೆಳೆದು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇರುವ ಒಂದು ಎಕರೆ ಜಮೀನಿನಲ್ಲಿ ವರ್ಷಪೂರ್ತಿ ವಿಧವಿಧ ತರಕಾರಿ ಬೆಳೆದು ಆದಾಯ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಗ್ರಾಮಕ್ಕೆ ಹೊಂದಿಕೊಂಡಿರುವ ಗುಡ್ಡದ ಇಳುವರಿಗೆ ಇರುವ ಎಕರೆ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಒಂದು, ಇನ್ನರ್ಧ ಎಕರೆಯಲ್ಲಿ ಇನ್ನೊಂದು ತರಕಾರಿ ಬೆಳೆ ಬೆಳೆಯುತ್ತಿರುವ ಸಲಬಣ್ಣ, ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಗಳಿಸುತ್ತಾರೆ. ಬೇರೆಯವರ ಅರ್ಧ ಎಕರೆ ಜಮೀನು ಲಾವಣಿ ಪಡೆದು ಅದರಲ್ಲೂ ತರಕಾರಿ ಬೆಳೆಯುತ್ತಿದ್ದಾರೆ.

ಸದ್ಯ ಹೀರೇಕಾಯಿ, ಬದನೆಕಾಯಿ ಮತ್ತು ಹಾಗಲಕಾಯಿ ಬೆಳೆದಿರುವ ಸಲಬಣ್ಣ, ನಿತ್ಯ ಬಾಗಲಕೋಟೆ ಮಾರುಕಟ್ಟೆಗೆ ಕಳುಹಿಸಿ ₹ 7 ಸಾವಿರದಿಂದ 8 ಸಾವಿರ ಆದಾಯ ಪಡೆಯುತ್ತಾರೆ. ಇದರಲ್ಲಿ ಆಳಿನ ಕೂಲಿ, ವಾಹನ ಬಾಡಿಗೆ ಖರ್ಚು ಹೋಗಿ ಕನಿಷ್ಠ 5 ಸಾವಿರ ರೂಪಾಯಿ ಉಳಿಯುತ್ತದೆ ಎಂದು ಹೇಳುತ್ತಾರೆ.

ಹೀಗೆ 6 ತಿಂಗಳು ನಿರಂತರ ಬೆಳೆ ಬಂದು 6-7 ಲಕ್ಷ ಆದಾಯ ಗಳಿಸಬಹುದು ಎಂದು ಹೇಳುವ ಅವರು, ಎಲ್ಲವನ್ನೂ ನಿಭಾಯಿಸುವುದಕ್ಕೆ ಅಂದಾಜು 1 ರಿಂದ 1.50 ಲಕ್ಷ ವೆಚ್ಚವಾಗುತ್ತದೆ ಎನ್ನುತ್ತಾರೆ. ಸ್ವಂತ ಜಮೀನಿನಲ್ಲಿ ಬೋರವೆಲ್ ಕೊರೆಯಿಸಿದ್ದು ಅದರಿಂದ ಸಿಗುವ ನೀರಿನಲ್ಲಿಯೇ ಹನಿ ನೀರಾವರಿ ವ್ಯವಸ್ಥೆ ಮಾಡಿ ವಿವಿಧ ರೀತಿಯ ತರಕಾರಿ ಬೆಳೆಯುತ್ತಿದ್ದಾರೆ.

ನಿತ್ಯ ಸಾಯಂಕಾಲ ತರಕಾರಿ ಕಟಾವು ಮಾಡಿ ಬೆಳಿಗ್ಗೆ ಮಾರುಕಟ್ಟೆಗೆ ಕಳುಹಿಸುವ ಕೆಲಸದಲ್ಲಿ ತೊಡಗುವ ಇವರು, ನಂತರ ತಮ್ಮ ಮತ್ತಿತರ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಅತ್ಯಂತ ಶಿಸ್ತುಬದ್ಧವಾಗಿ ಸಸಿ ನಾಟಿ ಮಾಡಿ ತರಕಾರಿ ಬೆಳೆಯುವ ಸಲಬಣ್ಣ, ಬರುವ ದಿನಗಳಲ್ಲಿ ಬೀನ್ಸ್ ಬೆಳೆಯುವ ಯೋಜನೆ ಮಾಡಿಕೊಂಡಿದ್ದು ಇದಕ್ಕಾಗಿ ಉತ್ತಮ ತಳಿಯ ಬೀಜದ ಹುಡುಕಾಟದಲ್ಲಿದ್ದಾರೆ.

‘ಈರುಳ್ಳಿ, ಕಡಲೆ, ಗೋವಿನಜೋಳ, ಸೂರ್ಯಕಾಂತಿ ಹೀಗೆ ಇತರೆ ಬೆಳೆಗಳನ್ನು ಬೆಳೆದರೆ ಅದಕ್ಕೆ ಮಾಡಿದ ಖರ್ಚಿಗಿಂತಲೂ ಕಡಿಮೆ ಆದಾಯ ಬರುತ್ತಿರುವಾಗ ನಮ್ಮಂತಹ ಸಣ್ಣ ರೈತರು ಬದುಕುವುದು ಅಸಾಧ್ಯದ ಮಾತು ಎಂದು ತಿಳಿದೇ ತರಕಾರಿ ಬೆಳೆಯುವ ರೂಢಿ ಬೆಳೆಸಿಕೊಂಡು ಸಂತೃಪ್ತಿಯ ಬದುಕು ಕಟ್ಟಿಕೊಂಡಿದ್ದೇನೆ’ ಎನ್ನುತ್ತಾರೆ ಸಲಬಣ್ಣ ತಿಮ್ಮಾಪೂರ.

ತರಕಾರಿ ಬೆಳೆಗಳ ಸಸಿ ನಾಟಿ ಮಾಡುವ ಮುನ್ನವೇ ಉತ್ತಮ ತಳಿಯನ್ನು ಆಯ್ಕೆ ಮಾಡಿಕೊಂಡು ವ್ಯವಸ್ಥಿತವಾಗಿ ಕೃಷಿ ಮಾಡುತ್ತೇನೆ. ಬೆಳೆಗಳಿಗೆ ರೋಗ, ಕೀಟಬಾಧೆ ತಗುಲದೇ ಇರುವುದಕ್ಕೆ ಅಲ್ಪ-ಸ್ವಲ್ಪ ಕೀಟನಾಟಶ ಸಿಂಪಡಣೆ ಮಾಡುತ್ತೇನೆ. ಅತಿಯಾಗಿ ಬಳಸುವುದಿಲ್ಲ.
– ಸಲಬಣ್ಣ ತಿಮ್ಮಾಪೂರ
ಸಮೃದ್ಧ ಬದನೆಕಾಯಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.