
ಬಾಗಲಕೋಟೆ: ಪಂಚ ವೃತ್ತಿಗಳ ಉತ್ತೇಜನಕ್ಕೆ ಶಿಘ್ರವೇ ವಿಶ್ವಕರ್ಮ ಸ್ವಾಮೀಜಿಗಳ ನಿಯೋಗದಿಂದ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಧಾರ್ಮಿಕ ಆಚರಣೆಗಳ ಜಾಗೃತಿಗಾಗಿ ವಿಶ್ವಬ್ರಾಹ್ಮಣ ಸಮುದಾಯದ ಸಮಾವೇಶ ಪ್ರತಿ ಜಿಲ್ಲೆಗಳಲ್ಲಿ ನಡೆಸಲಾಗುವುದು ಎಂದು ಕೋರವಾರದ ಮೂರುಜಾವಮಠದ ಪಡದಯ್ಯ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ಸಮೀಪದ ಗದ್ದನಕೇರಿ ಮಳೆಪಯ್ಯ ಸ್ವಾಮಿಗಳ ಮಠದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಾಠಾಧಿಪತಿಗಳ ಅಭಿವೃದ್ಧಿ ಸಂಘದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯದ ಜಿಲ್ಲೆಗಳಲ್ಲಿ ಧಾರ್ಮಿಕ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಚಿನ್ನ, ಬೆಳ್ಳಿ ಬೇಲೆ ಗಗನಕ್ಕೆ ಏರಿರುವುದರಿಂದ ಚಿನ್ನ ಬೆಳ್ಳಿ ಆಭರಣ ತಯಾರಕರು ಹಾಗೂ ಪತ್ತಾರಿಕೆ ಮಾಡುವ ವೃತ್ತಿಪರರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಅದೇ ರೀತಿ ಬಡಿಗತನ, ಕಮ್ಮಾರಿಕೆ, ಕಂಚು, ಶಿಲ್ಪ ವೃತ್ತಿಯ ಕೆಲಸಗಳು ಕೂಡ ಕಡಿಮೆಯಾಗಿ ಜೀವನ ನಡೆಸುವುದು ಕಷ್ಟವಾಗಿದೆ ಎಂದರು.
ಈ ಎಲ್ಲ ವೃತ್ತಿಗಳ ಉತ್ತೇಜನಕ್ಕಾಗಿ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು, ಎಲ್ಲ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಕ್ಕು ಪ್ರತಿಪಾದಿಸಬೇಕು ಎಂದು ಹೇಳಿದರು.
ಶಹಾಪುರದ ಏಕದಂಡಿಗಿಮಠದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಸಮುದಾಯದಲ್ಲಿ ನಿತ್ಯ ಕರ್ಮಗಳ ಆಚರಣೆಯ ಸಂಸ್ಕಾರ ಅಗತ್ಯವಾಗಿದೆ. ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಆಚರಣೆಗಳನ್ನು ಕಲಿಸಬೇಕಾಗಿದೆ.
ಸಂಘದ ರಾಜ್ಯ ಅಧ್ಯಕ್ಷ ಸಿಂದಗಿ ಮೂರುಜಾವಮಠದ ರಾಮಚಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಸಮಾಜದ ಪ್ರತಿ ವ್ಯಕ್ತಿಯ ಬೆಳವಣಿಗೆಯೇ ನಮ್ಮ ಆಶಯವಾಗಿದೆ ಎಂದರು.
ಮುರನಾಳ ಮಳೆರಾಜೇಂಧ್ರ ಸ್ವಾಮಿಮಠದ ಜಗನ್ನಾಥ ಸ್ವಾಮೀಜಿ. ಮಹೇಂದ್ರ ಸ್ವಾಮೀಜಿ, ಶಾಡಲಗಿರಿ ಏಕದಂಡಿಗಿಮಠದ ನಾಗಲಿಂಗ ಸ್ವಾಮೀಜಿ, ಸವದತ್ತಿಯ ಸೋಮಲಿಂಗಯ್ಯ ಸ್ವಾಮೀಜಿ, ನಾಲತವಾಡದ ಬ್ರಹ್ಮಾಂಡಬೇರಿಮಠದ ಪಂಪಾಪತಿ ಸ್ವಾಮೀಜಿ, ಕಲಬುರಗಿಯ ಏಕದಂಡಿಗಮಠದ ಸುರೇಂದ್ರ ಸ್ವಾಮೀಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.