ADVERTISEMENT

ಮುಳುಗಡೆ ತಡೆಯಲು ಶಾಶ್ವತ ಕ್ರಮಕ್ಕೆ ಆಗ್ರಹ

ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಹೂಳು: ಜುಲೈ 27ಕ್ಕೆ ಕೂಡಲಸಂಗಮದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:02 IST
Last Updated 14 ಜುಲೈ 2020, 17:02 IST
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಮುಖಂಡರ ಸಭೆ ನಡೆಯಿತು
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಮುಖಂಡರ ಸಭೆ ನಡೆಯಿತು   

ಬಾಗಲಕೋಟೆ:ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಹೂಳು ತುಂಬಿಕೊಂಡು ಅಂತರಾಷ್ಟ್ರೀಯ ಮಟ್ಟದ ಧಾರ್ಮಿಕ ತಾಣ ಕೂಡಲ ಸಂಗಮ ಪದೇ ಪದೇ ಪ್ರವಾಹದ ಸುಳಿಗೆ ಸಿಲುಕುತ್ತಿದೆ. ಅದನ್ನು ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.

ಇಲ್ಲಿನ ಅನುಗ್ರಹ ಸಭಾಭವನದಲ್ಲಿ ಮಂಗಳವಾರ ನಡೆದ ರೈತರ ಪ್ರಮುಖರ ಸಭೆ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಸಮಸ್ಯೆ ಪರಿಹಾರಕ್ಕೆ ಈ ಭಾಗದ ಸಾರ್ವಜನಿಕರು, ಜನಪ್ರತಿನಿಧಿಗಳು ಚರ್ಚೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಬೇಕು. ಕೂಡಲಸಂಗಮೇಶ್ವರ ದೇವಸ್ಥಾನ, ವಿಶ್ವಗುರು ಬಸವಣ್ಣನವರ ಐಕ್ಯಮಂಟಪ ಹಾಗೂ ನದಿಗಳ ಉಳಿವಿಗಾಗಿ ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.

ADVERTISEMENT

ಈ ಕಾರ್ಯದ ಅನುಷ್ಠಾನದ ಹಂತವಾಗಿ ಹೋರಾಟ ರೂಪಿಸಲು ಜುಲೈ 27 ರಂದು ಕೂಡಲಸಂಗಮದಲ್ಲಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ರೈತ ಪ್ರಮುಖರ ಸಭೆ ಕೈಗೊಂಡು ಚರ್ಚಿಸಲಾಗುವುದು. ಅಗಸ್ಟ್ 27 ರಂದು ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ನಾರಾಯಣಪುರ ಜಲಾಶಯದಲ್ಲಿ ಸಂಗ್ರಹವಾಗುವ ಹಿನ್ನೀರಿನಿಂದ ಪ್ರತಿ ವರ್ಷ ಸಂಗಮನಾಥನ ದೇವಸ್ಥಾನ, ಬಸವಣ್ಣನವರ ಐಕ್ಯ ಮಂಟಪ ಮುಳುಗಡೆಯ ಭೀತಿ ಅನುಭವಿಸುತ್ತಿವೆ. ಕಳೆದ ವರ್ಷ ದೇವಸ್ಥಾನದ ಒಳಗೆ ನೀರು ನುಗ್ಗಿ ಸಾಕಷ್ಟು ತೊಂದರೆಯಾಗಿದೆ. ಐಕ್ಯ ಮಂಟಪದಲ್ಲಿ ಬಿರುಕು ಕಾಣಿಸಿತ್ತು. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕಾಗಿರುವದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಈ ಕಾರ್ಯ ಅನುಷ್ಠಾನದಲ್ಲಿ ಸಾರ್ವಜನಿಕರು, ರೈತ ಪ್ರಮುಖರು, ಜನಪ್ರತಿನಿಧಿಗಳು ಮುಕ್ತವಾಗಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ’ನೆಲ, ಜಲ, ಭೂಮಿಯನ್ನು ಉಳಿಸುವ ಕಾಯಕ ಇಂದು ನಡೆಯಬೇಕಾಗಿದೆ‘ ಎಂದರು.

ಸಭೆಯಲ್ಲಿ ನಿಡಗುಂದಿಯ ಸಂಗಣ್ಣ ಕೋತಿನ, ನಾಲತವಾಡದ ಗಿರೀಶಗೌಡ ಪಾಟೀಲ, ಮುದ್ದೇಬಿಹಾಳದ ಸಂಗಮೇಶ ಮೇಟಿ, ಚನ್ನಪ್ಪಗೌಡ ಹಂಪನಗೌಡರ, ಮಂಜು ಪರೂತಗೇರಿ, ರೈತ ವಿಭಾಗದ ರಾಜ್ಯ ಘಟಕದ ಅಮರೇಶ ನಾಗೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.