ಅಮೀನಗಡ: ನೇಕಾರರಿಗೆ ಮಿತವ್ಯಯ ನಿಧಿಯ ₹ 1.93 ಕೋಟಿ ದುರುಪಯೋಗವಾಗಿದೆ ಎಂದು ಆರೋಪಿಸಿ ಸಮೀಪದ ಸೂಳೇಭಾವಿಯ ನೂರಕ್ಕೂ ಹೆಚ್ಚು ನೇಕಾರರು ಸ್ಥಳೀಯ ಶಾಖಂಬರಿ ನೇಕಾರ ಸಹಕಾರ ಸಂಘದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಶಾಖಂಬರಿ ನೇಕಾರ ಸಹಕಾರ ಸಂಘದಲ್ಲಿ 2015 ರಿಂದ 2025 ರವರೆಗಿನ ಅವಧಿಯಲ್ಲಿನ ಹಣವನ್ನು ಸರ್ಕಾರದ ಖಜಾನೆಗೆ ಜಮಾ ಮಾಡಿಲ್ಲ . ಈ ಅವಧಿಯಲ್ಲಿನ ಮಿತವ್ಯಯ ನಿಧಿಯಿಂದ ನೇಕಾರರಿಗೆ ಬರುವ ಹಣವು ದುರ್ಬಳಕೆಯಾಗಿದೆ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮಿತವ್ಯಯ ನಿಧಿಯಿಂದ ನೇಕಾರರಿಗೆ ನಿಗದಿತ ಸಮಯದಲ್ಲಿ ಸೇರಬೇಕಾದ ಹಣವನ್ನು ಸರಿಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ಎ. ಪಿರಜಾದೆ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ಸಂಘದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನೇಕಾರರಿಗೆ ಸಿಗಬೇಕಾದ ಹಣವನ್ನು ಭರಣ ಮಾಡಲು ಈಗಾಗಲೇ ಪ್ರಯತ್ನಿಸಲಾಗುತ್ತಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಅವರ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆ ನೇಕಾರರೊಂದಿಗೆ ಸದಾ ಇರುತ್ತದೆ. ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮೋನಪ್ಪ ರಾಮದುರ್ಗ, ಆರ್.ಜೆ. ರಾಮದುರ್ಗ, ರೋಮಣ್ಣ ಜನಿವಾರದ, ನಂದಪ್ಪ ಮಿನಜಿಗಿ, ಜ್ಞಾನೇಶ ಧೂಪದ ಸೇರಿದಂತೆ ನೂರಕ್ಕೂ ಅಧಿಕ ನೇಕಾರರು ಭಾಗಿಯಾಗಿದ್ದರು.
ಪಿಎಸ್ಐ ಜ್ಯೋತಿ ವಾಲಿಕಾರ ನೇತೃತ್ವದಲ್ಲಿ ಬಂದೋಬಸ್ತ್ ನೀಡಲಾಗಿತ್ತು. ಸಂಘದ ಅಧ್ಯಕ್ಷ ಪ್ರವೀಣ ರಾಮದುರ್ಗ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಡಪ್ಪ ಕುರಿ, ಕೆ.ಎಸ್ ರಾಮದುರ್ಗ ಇದ್ದರು.
ಹಣ ದುರ್ಬಳಕೆ ಕುರಿತು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ನೇಕಾರರಿಗೆ ಅನ್ಯಾಯವಾಗದಂತೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.– ಬಿ.ಎ ಪಿರಜಾದೆ, ಉಪ ನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.