ADVERTISEMENT

ಮಾತೆ ಮಹಾದೇವಿ ಬರಹ: ‘ದೇವರೆಂಬ ಅದ್ಭುತ ಶಕ್ತಿ’

ಮಾತೆ ಮಹಾದೇವಿ
Published 14 ಮಾರ್ಚ್ 2019, 12:57 IST
Last Updated 14 ಮಾರ್ಚ್ 2019, 12:57 IST
ಮಾತೆ ಮಹಾದೇವಿ
ಮಾತೆ ಮಹಾದೇವಿ   

ದೇವರು ಇದ್ದಾನೆ ಎಂದು ಬಹುಪಾಲು ಜನ ನಂಬಿದ್ದಾರೆ. ದೇವರು ಎಂಬುದು ಸುಳ್ಳು, ಇದೊಂದು ಭ್ರಾಂತಿ ಎಂಬುದು ನಾಸ್ತಿಕರ ವಾದ. ದೇವರು ಇದ್ದಾನೆ ಎಂದು ನಂಬಿರುವ ಬಹುಪಾಲು ಜನಕ್ಕೆ ದೇವರ ಸ್ವರೂಪವೇನು ಎಂಬುದು ತಿಳಿದಿಲ್ಲ. ಹಲವಾರು ರೂಪಗಳನ್ನು ಕಲ್ಪಿಸಿಕೊಂಡು ಅವರೇ ದೇವರು ಎನ್ನುತ್ತಾರೆ. ಶಿವ, ವಿಷ್ಟು, ರಾಮ, ಕೃಷ್ಣ, ಹನಮಂತ, ಗಣೇಶ, ದೇವಿ ಹೀಗೆ ದೇವರು ಎಂದು ಪಟಗಳಲ್ಲಿ ಕಾಣಿಸಿಕೊಳ್ಳುವ ಕಾರ್ಯ ಮುಂದುವರಿಯುತ್ತದೆ.

ವೀರ ವಿರಾಗಿಣಿ ಅಕ್ಕಮಹಾದೇವಿ ತನ್ನ ಒಂದು ವಚನದಲ್ಲಿ ದೇವರ ಸ್ವರೂಪ ಕುರಿತು ಹೀಗೆ ಹೇಳಿದ್ದಾಳೆ. ದೇವರು ಸಾವಿಲ್ಲದವನು, ಏಕೆಂದರೆ ಅವನಿಗೆ ಹುಟ್ಟೂ ಇಲ್ಲ. ಅದಕ್ಕೆ ಸಾವು ಇಲ್ಲ. ಹುಟ್ಟಿ ಸತ್ತವರಾರೂ ದೇವರಲ್ಲ. ಒಂದು ವೇಳೆ ವಿಶೇಷ ಸಾಧನೆ ಮಾಡಿದವರಾಗಿದ್ದರೆ ಅವರನ್ನು ದಿವ್ಯಾತ್ಮರು ಎಂದು ಕರೆಯಬಹುದೇ ವಿನಾ ದೇವರು ಎನ್ನಬಾರದು. ಕೇಡಿಲ್ಲದವನು ದೇವರು ಅಂದರೆ ಅವನಿಗೆ ಕೆಡುಕು ಮಾಡಲು ಯಾರಿಗೂ ಸಾಧ್ಯವಿಲ್ಲ.

ದೇವರಿಗೆ ಕುರುಹು ಇಲ್ಲ. ಅಂದರೆ ಗಂಡಿನ ಕುರುಹುವಾಗಲಿ ಹೆಣ್ಣಿನ ಕುರುಹುಗಳಾಗಲಿ ಇರುವುದಿಲ್ಲ. ದೇವರು ಅಪಾರ ಚೆಲುವನು, ಅವನ ಚೆಲುವಿಕೆಯನ್ನು ಉದಿಸುವ ಸೂರ್ಯನಲ್ಲಿ, ಅರಳುವ ಹೂವಿನಲ್ಲಿ, ಜುಳುಜುಳು ಸದ್ದು ಮಾಡುತ್ತ ಹರಿಯುವ ನದಿಯ ಓಟದಲ್ಲಿ , ಸೃಷ್ಟಿಯ ಕಣಕಣದಲ್ಲಿ ಕಾಣಬಹುದು. ದೇವರಿಗೆ ಕುಲವಿಲ್ಲ ಆದ್ದರಿಂದ ಕುಲಾಭಿಮಾನವಿದ್ದವನು ದೇವರಲ್ಲ. ದೇವರಿಗೆ ಭವವಿಲ್ಲ, ಭಯವಿಲ್ಲ. ಭವ ಎಂದರೆ ಹುಟ್ಟು ಸಾವುಗಳ ಸರಪಳಿ ಇದು ಜೀವಾತ್ಮನಿಗೆ ವಿನಾ ಪರಮಾತ್ಮನಿಗಲ್ಲ, ಅವನಿಗೆ ಭಯವಿಲ್ಲ. ಏಕೆಂದರೆ ಅವನನ್ನು ಭಯಪಡಿಸುವವರು ಯಾರು ಇಲ್ಲ. ಅವನು ಆತ್ಯಂತಿಕ ಶಕ್ತಿ.

ADVERTISEMENT

(ಪ್ರಜಾವಾಣಿಯ ವಚನಾಮೃತ ಅಂಕಣದ ಬರಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.