ಚುನಾವಣೆ
ರಬಕವಿ ಬನಹಟ್ಟಿ: ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು
ಆದಷ್ಟು ಬೇಗನೇ ನಡೆಸಬೇಕು. ಈ ನಿಟ್ಟಿನಲ್ಲಿ ಜುಲೈ 16 ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಹೈಕೋರ್ಟ್ ಚುನಾವಣೆ ನಡೆಸಲು ಆದೇಶ ನೀಡಿದೆ. ಚುನಾವಣಾ ಆಯೋಗ ಕೂಡ ಚುನಾವಣೆ ನಡೆಸಲು ಸಜ್ಜಾಗಿದೆ. ಇಷ್ಟಾದರೂ ಚುನಾವಣೆ ತಡ ಏಕೆ’ ಎಂದು ಅವರು
ಪ್ರಶ್ನಿಸಿದರು.
ಶಾಸಕರ ನಂತರದ ಸ್ಥಾನ–ಮಾನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಕಾರ್ಯಕರ್ತರಿಗೆ ಬರುತ್ತವೆ. ಅಂದಾಜು ಒಂದು ಸಾವಿರದಷ್ಟು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಮೂರುವರೆ ಸಾವಿರದಷ್ಟು ತಾಲ್ಲೂಕು ಪಂಚಾಯಿತಿ ಸದಸ್ಯರ ಅಧಿಕಾರಕ್ಕೆ ಅರ್ಹರಾದ ಕಾರ್ಯಕರ್ತರು ಅಧಿಕಾರ ಇಲ್ಲದೇ ಇದ್ದಾರೆ. ನಾಯಕತ್ವಕ್ಕೆ ಅರ್ಹರಾದವರಿಗೆ ನಾಯಕತ್ವ ನೀಡಬೇಕಾಗಿದೆ.
ಈ ನಿಟ್ಟಿನಲ್ಲಿ ಚುನಾವಣೆ ಅಗತ್ಯವಾಗಿವೆ. ಕಾರ್ಯಕರ್ತರ ಭಾವನೆಗಳಿಗೆ ಆದಷ್ಟು ಬೇಗ ಸ್ಪಂದಿಸಿ ಚುನಾವಣೆ
ನಡೆಸಬೇಕು ಎಂದು ಆಗ್ರಹಿಸಿದರು.
‘ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಈಗ ಅಧಿಕಾರಿಗಳೇ ಅಧಿಕಾರ ಚಲಾಯಿಸುತ್ತಿದ್ದಾರೆ.
ಸಂತುಷ್ಟ ಕಾರ್ಯಕರ್ತರು ಇದ್ದರಷ್ಟೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಮತ್ತು ಅಭಿವೃದ್ಧಿಯಾಗಲು ಸಾಧ್ಯ. ಕಾರ್ಪೋರೇಷನ್ ಮತ್ತು ಬೋರ್ಡ್‌ಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡುವ ಕಾರ್ಯ ಕೂಡ ನಡೆಯಬೇಕಿದೆ’ ಎಂದು ನಂಜಯ್ಯನಮಠ ತಿಳಿಸಿದರು.
ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಮಲ್ಲಪ್ಪ ಸಿಂಗಾಡಿ, ಭೀಮಶಿ ಮಗದುಮ್, ನೀಲಕಂಠ ಮುತ್ತೂರ, ಶೇಖರ ಹಕ್ಕಲದಡ್ಡಿ, ಶಂಕರ ಕೆಸರಗೊಪ್ಪ, ರಾಹುಲ ಕಲಾಲ, ಗಿರೀಶ ಅಂಕಲಗಿ, ಅಮಿತ ನಾಶಿ, ರಾಜು ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.