ADVERTISEMENT

ಅಂಕಸಮುದ್ರದ ಗಾಂಧಿ ಪ್ರತಿಮೆಗೆ 60

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:15 IST
Last Updated 2 ಅಕ್ಟೋಬರ್ 2012, 4:15 IST

ಹಗರಿಬೊಮ್ಮನಹಳ್ಳಿ: `60ವರ್ಷದ ಹಿಂದೆ ಊರಾಗಿನ ಮಂದಿ ನಾಕ ನಾಕಾಣಿ ಕೊಟ್ರು. ಇಪ್ಪತ್ತು ರೂಪಾಯಿ ಭರ್ತಿ ಆತು. ಇದೇ ರೊಕ್ಕದಾಗ ಹಂಪಾಪಟ್ಟಣ ದಿಂದ ಗಾಂಧಿ ಪ್ರತಿಮೆ ತಂದ್ವಿ. ನಮ್ಮೂರ ಉಪ್ಪಾರ ಮಲ್ಲಪ್ಪ ಇಡೀ ದಿನಾ ಗಾಂಧಿ ಪ್ರತಿವೆುಯನ್ನು ಭುಜದ ಮೇಲೆ ಹೊತ್ಕೊಂಡು ಊರಾಗೆಲ್ಲ ಮೆರವಣಗಿ ಮಾಡ್ದ. ಆಮೇಲೆ ಊರಾಗ ಕಟ್ಟಿರೋ ಕಟ್ಟಿ ಮೇಲೆ ಗಾಂಧಿ ಪ್ರತಿಮೆ ಸ್ಥಾಪನಾ ಮಾಡಿದ್ವಿ~

ನಿಮ್ಮೂರಿನ ಗಾಂಧಿ ಪ್ರತಿಮೆ ನಿರ್ಮಾಣದ ಹಿಂದಿನ ಕಥೆ ಹೇಳುತ್ತೀರಾ ಎಂದು ಕೇಳಿದಾಗ ಹಲ್ಲಿಲ್ಲದ ಬೊಚ್ಚು ಬಾಯಿಯಿಂದ ಆ ಕಾಲ ಘಟ್ಟದಲ್ಲಿ ಗ್ರಾಮದ ಸರಕಾರಿ ಶಾಲೆಯ ಬಳಿ ಗಾಂಧಿ ಪುತ್ಥಳಿ ಪ್ರತಿಷ್ಠಾಪನೆ ನಡೆಸಿದ ಸಂಭ್ರಮವನ್ನು 75ರ ವಯೋವೃದ್ಧ ಜಗಳೂರು ಬಸವರಾಜಪ್ಪ ಹೀಗೆ ವಿವರಿಸಿದರು. ಅಂದಿನಿಂದ ಇಂದಿನವರೆಗೂ ಗಾಂಧಿ ಪ್ರತಿಮೆಗೆ ಕಳೆದ 60ವರ್ಷದಿಂದ ಈವರೆಗೂ ತಪ್ಪದೇ ಬಣ್ಣ ಬಳಿಯುತ್ತಿರುವುದು ಇವರೇ.

ಅಂಕಸಮುದ್ರ ಗ್ರಾಮದಿಂದ ಕೂಗಳತೆ ಯಲ್ಲಿರುವ ಹಂಪಾಪಟ್ಟಣವಿದೆ. ಆ ಗ್ರಾಮದ ಆಯುರ್ವೇದ ವೈದ್ಯ ಡಾ.ಶಮನಮೂರ್ತಿ ಇಡೀ ಅಂಕಸಮುದ್ರ ಗ್ರಾಮಕ್ಕೆ ಫ್ಯಾಮಿಲಿ ವೈದ್ಯರಾಗಿದ್ದರು. ಅವರಿಗೆ ವಿಪರೀತ ದೈವಭಕ್ತಿ ಜೊತೆಗೆ ದೇಶಭಕ್ತಿ. ಹಾಗಾಗಿ ಅವರು ಹಂಪಾಪಟ್ಟಣ ಗ್ರಾಮದಲ್ಲಿ ಮುರುಗನ್ ಗುಡಿ ಕಟ್ಟಿಸುವ ನಿಟ್ಟಿನಲ್ಲಿ ಮದ್ರಾಸ್‌ನಿಂದ ಮುರುಗನ್ ಮೂರ್ತಿಯೊಂದಿಗೆ ಗಾಂಧೀಜಿಯವರ ಎರಡು ಪುತ್ಥಳಿಗಳನ್ನು ತಂದಿದ್ದರು.

ವಿಪರೀತ ಜ್ವರದಿಂದ ನರಳುತ್ತಿದ್ದ ಅಂಕಸಮುದ್ರದ ಮುದೇಗೌಡ್ರು ಒಮ್ಮೆ ಡಾ.ಶಮನಮೂರ್ತಿಯವರ ಬಳಿ ಚಿಕಿತ್ಸೆ ಗೆಂದು ಹೋದಾಗ ಅವರ ಮನೆಯಲ್ಲಿದ್ದ ಎರಡು ಗಾಂಧಿ ಪ್ರತಿಮೆಗಳು ಆಕರ್ಷಿಸಿ ದವು. ಅಪ್ಪಟ ಗಾಂಧೀವಾದಿಗಳಾಗಿದ್ದ ಮುದೇಗೌಡ್ರು ಗಾಂಧೀಜಿಯವರ ಒಂದು ಪುತ್ಥಳಿ ನಮಗೆ ನೀಡಿದರೆ ನಮ್ಮ ಗ್ರಾಮದಲ್ಲಿ ಪ್ರತಿಷ್ಠಾಪಿಸುವ ಜೊತೆಗೆ ನಮ್ಮೂರಿನ ಯುವಕರಲ್ಲಿ ದೇಶಾಭಿಮಾನ, ಗಾಂಧೀಜಿಯವರ ಸತ್ಯ, ಅಹಿಂಸೆ ತತ್ವಗಳು ಅನುರಣಿಸಬಹುದು ಎಂಬ ಆಶಯ ವ್ಯಕ್ತಪಡಿಸಿ ಪ್ರತಿಮೆಯನ್ನು ತಂದು 1952ರ ಅ. 2ರಂದು ಸ್ಥಾಪಿಸಿದರು.

ಅಂದಿನಿಂದ ಇಂದಿನವರೆಗೂ ಶಿವಾನಂದಗೌಡರು ಗಾಂಧಿ ಪ್ರತಿಮೆಗೆ ಬಳಿಯಲೆಂದು ಬಣ್ಣ ಒದಗಿಸುವುದು ವಿಶೇಷ. ಇದೇ ಗ್ರಾಮದಲ್ಲಿ  ನಿತ್ಯ ಗಾಂಧಿ ಸ್ಮೃತಿ ಮಾಡುವ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗಾಂಧಿ ಜಯಂತಿ ಸಹಿತ ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವ ದಿನಗಳಲ್ಲಿ ಪ್ರಭಾತಫೇರಿ ನಡೆಸಿ ಗಾಂಧಿ ಪ್ರತಿಮೆ ಬಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಹಾಡುತ್ತಾರೆ. ಮಕ್ಕಳ ಸಂಭ್ರಮದಲ್ಲಿ ಇಡೀ ಗ್ರಾಮದ ಜನತೆ ಪಾಲ್ಗೊಳ್ಳುತ್ತಾರೆ.

ಗಾಂಧೀಜಿಯವರ ಪ್ರತಿಮೆಗೆ ಧಕ್ಕೆಯಾಗದಂತೆ ತಡೆಯಲು ಸುತ್ತಲೂ ಬೇಲಿ ನಿರ್ಮಾಣ ಮಾಡುವ ಜೊತೆಗೆ ಉದ್ಯಾನ ನಿರ್ಮಿಸುವ ಉದ್ದೇಶದಿಂದ ತಾ.ಪಂ.ಸದಸ್ಯ ಶಿವಕುಮಾರ್ ಅಗತ್ಯ ಅನುದಾನಕ್ಕಾಗಿ ತಾ.ಪಂ.ಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.