ADVERTISEMENT

ಅಂಗನವಾಡಿ ಆಹಾರ ಸಾಮಗ್ರಿ ಕಾಳಸಂತೆಯಲ್ಲಿ ಪತ್ತೆ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:36 IST
Last Updated 13 ಡಿಸೆಂಬರ್ 2013, 6:36 IST

ಹೂವಿನಹಡಗಲಿ: ಪಟ್ಟಣದ ಉದ್ಭವ ಸರ್ಕಲ್ ನಲ್ಲಿರುವ ಎಂ.ಸದಾನಂದ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ  ಅಂಗನವಾಡಿ ಕೇಂದ್ರಗಳಿಗೆ ಸೇರಿದ  ‘ಕ್ಷೀರಭಾಗ್ಯ’ ಹಾಲಿನ ಪುಡಿ ಮತ್ತು ಆಹಾರ ಸಾಮಗ್ರಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ  ಖಚಿತ ಮಾಹಿತಿ ಆಧರಿಸಿ ಸಿಡಿಪಿಒ ಸೋಮಣ್ಣ ಚಿಣ್ಣೂರು ದಾಳಿ ನಡೆಸಿ 35 ಪ್ಯಾಕೆಟ್‌ ಹಾಲಿನ ಪುಡಿ, 25 ಕೆಜಿ ಹೆಸರು ಬೇಳೆ, 180 ಕೆಜಿ ಅಕ್ಕಿ, 50 ಕೆಜಿ ರವೆ, 100 ಕೆಜಿ ಗೋಧಿ, 25 ಕೆಜಿ ಶೇಂಗಾ, 20 ಕೆಜಿ ಹೆಸರು ಕಾಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸಿಡಿಪಿಒ ನೀಡಿದ ದೂರಿನ ಮೇರೆಗೆ  ಸದಾನಂದ ವಿರುದ್ಧ  ಪಿಎಸ್ಐ ಆಂಜನೇಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ರಕ್ಷಣೆ?: ಸದಾನಂದ ಅವರನ್ನು ಪೊಲೀಸರು ವಿಚಾರಣೆಗಾಗಿ ಕರೆ ತರುವಂತೆಯೇ ಸಚಿವರ ಬೆಂಬಲಿಗರೊಬ್ಬರು ಆರೋಪಿಯ ರಕ್ಷಣೆಗೆ ಧಾವಿಸಿದ್ದು ಕಂಡುಬಂತು. ಅಂಗನವಾಡಿ ಆಹಾರ ಸಾಮಗ್ರಿ ಮಾರಾಟದ ದೊಡ್ಡ ಜಾಲವೇ ಇದ್ದು, ಆರೋಪಿ ರಕ್ಷಣೆಗೆ ರಾಜಕಾರಣಿಗಳು ನಿಂತಿರುವುದರಿಂದ ಪ್ರಕರಣದ ತನಿಖೆ ಬೇರೆ ದಿಕ್ಕಿನಲ್ಲಿ ಸಾಗಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಗಮನಹರಿಸಿ ಉನ್ನತ ಮಟ್ಟದ ತನಿಖೆ ನಡೆಸಿ  ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

‘ತಾಲ್ಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ  ಆಹಾರ ಸಾಮಗ್ರಿ ಮಾರಾಟವಾಗುತ್ತಿದೆ. ಕೆಲವೆಡೆ ಕಡಿಮೆ ಪ್ರಮಾಣದಲ್ಲಿ  ಆಹಾರ ಧಾನ್ಯ ನೀಡಿ ಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ’ ಎಂದು  ತಾ.ಪಂ. ಸಾಮಾನ್ಯ ಸಭೆಯಲ್ಲಿ  ಇಟ್ಟಿಗಿ ಕ್ಷೇತ್ರದ ಸದಸ್ಯೆ ಎಂ.ಜೆ.ಲಕ್ಷ್ಮಿ  ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.