ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 6:37 IST
Last Updated 11 ಜನವರಿ 2014, 6:37 IST

ಬಳ್ಳಾರಿ: ಐಸಿಡಿಎಸ್ ಯೋಜನೆಯ ಖಾಸಗೀಕರಣ ವಿರೋಧಿಸಿ ಮತ್ತು ಕನಿಷ್ಠ ರೂ10 ಸಾವಿರ  ಮಾಸಿಕ ವೇತನಕ್ಕಾಗಿ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಫೆಡರೇಷನ್ ವತಿಯಿಂದ ನಗರದಲ್ಲಿ ಶುಕ್ರವಾರ ಜೈಲ್‌ಭರೋ ಚಳವಳಿ ನಿಮಿತ್ತ ರಸ್ತೆ ತಡೆ ನಡೆಸಲು ಮುಂದಾದ ನೂರಾರು ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಸ್ಥಳೀಯ ಮೋತಿವೃತ್ತದ ಬಳಿ ಶುಕ್ರವಾರ (ಸಿಐಟಿಯು, ಎಐಟಿಯುಸಿ ಸಂಯೋ ಜಿತ) ಮುಖಂಡರಾದ ಎಸ್.ಎ.ಆದಿಮೂರ್ತಿ, ಎ.ಆರ್.ಎಂ. ಇಸ್ಲಾಯಿಲ್ ಸಮ್ಮು ಖದಲ್ಲಿ ರಸ್ತೆಯ ನಡುವೆ ಕುಳಿತು ಪ್ರತಿಭಟಿಸಿದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಕ್ರಮವಾಗಿ ಸಿ ಮತ್ತು ಡಿ ವರ್ಗದ ನೌಕರರು ಎಂದು ಪರಿಗಣಿಸಿ ರೂ12500ಗಳಂತೆ ಕನಿಷ್ಠ ವೇತನ ನಿಗದಿ ಪಡಿಸಬೇಕು. ಸರ್ಕಾರಿ ಕಾಯಂ ನೌಕರರ ಎಲ್ಲ ಸೌಲಭ್ಯ ಒದಗಿಸಬೇಕು. ಸೇವಾ ಅವಧಿಯ ಆಧಾರದಡಿ ಪ್ರತಿವರ್ಷ ರೂ200ನ್ನು ನೀಡಬೇಕು ಎಂದು ಎಐಟಿ ಯು­ಸಿಯ ಮುಖಂಡ ಎಸ್.ಎ.ಆದಿಮೂರ್ತಿ ಒತ್ತಾಯಿಸಿದರು.

ಸಾಯಂಕಾಲದವರೆಗೂ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಆಹಾರದ ಪ್ರಮಾಣ ಹೆಚ್ಚಿಸಿ, ಮಕ್ಕಳಿಗೆ ಸಮವಸ್ತ್ರ ವಿತರಿಸಬೇಕು. ಕಾರ್ಯಕರ್ತ ಮತ್ತು ಸಹಾಯಕರಿಗೆ ಇತರೆ ಕಾರ್ಯದ ಜವಾಬ್ದಾರಿ ವಹಿಸಬಾರದು. ಇಎಸ್ಐ, ಪಿಎಫ್ ಸೌಲಭ್ಯ ಇತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಎಐಟಿಯುಸಿ ಮತ್ತು ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರ ಸಂಘ ಹಾಗೂ ಫೆಡರೇಷನ್‌ನ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ, ಮುಖಂಡರಾದ ಜೆ. ಸತ್ಯಬಾಬು, ಆರ್.ಎಸ್. ಬಸವರಾಜ, ಅರ್ಕಾಣಿ, ಎಂ.ಲೀಲಾವತಿ, ಎಂ.ಎರ್ರೆಮ್ಮ, ಬಗ್ಗೂರು ಕೃಷ್ಣವೇಣಿ, ಆರ್.ಲಕ್ಷ್ಮಿ, ಭಾಗ್ಯರೇಖಾ ಸೇರಿ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮ ನಹಳ್ಳಿ, ಕೂಡ್ಲಿಗಿ, ಬಳ್ಳಾರಿ ತಾಲ್ಲೂಕುಗಳ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.

ಬಂಧನ; ಬಿಡುಗಡೆ
ಹೂವಿನಹಡಗಲಿ:
ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಶುಕ್ರವಾರ ರಸ್ತೆ ತಡೆ  ಚಳವಳಿ ನಡೆಸಿದ  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ಪಟ್ಟಣದ ಗವಿಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಶಾಸ್ತ್ರಿ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳಾ, ಕಾರ್ಯದರ್ಶಿ ಬಿ.ಕಮಲಾಕ್ಷಿ, ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಅಂಗಡಿ, ಸುರೇಶ ಮಾಗಳ, ಅಂಗನವಾಡಿ ಫೆಡರೇಷನ್‌ನ ಬಿ.ಹೇಮಾವತಿ, ಬಿ.ಕೊಟ್ರಮ್ಮ, ಕೆ.ವಿನೋದ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.