ADVERTISEMENT

‘ಅಂತರರಾಜ್ಯ ಗಡಿಯಲ್ಲಿ ತಪಾಸಣಾ ಕೇಂದ್ರ’

ಚುನಾವಣೆ ಸುವ್ಯವಸ್ಥೆಗೆ ಅಂತರರಾಜ್ಯ ಸಮನ್ವಯ ಸಭೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:36 IST
Last Updated 4 ಏಪ್ರಿಲ್ 2018, 10:36 IST
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಂತರ್‌ರಾಜ್ಯಸಮನ್ವಯ ಸಭೆ ನಡೆಯಿತು.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಂತರ್‌ರಾಜ್ಯಸಮನ್ವಯ ಸಭೆ ನಡೆಯಿತು.   

ಬಳ್ಳಾರಿ: ‘ಬಳ್ಳಾರಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 15 ತಪಾಸಣಾ ಕೇಂದ್ರಗಳನ್ನು ಚುನಾವಣೆ ಸುವ್ಯವಸ್ಥೆಗಾಗಿ ಸ್ಥಾಪಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ಮತ್ತು ಆಂಧ್ರಪ್ರದೇಶ ಅಂತರರಾಜ್ಯ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಹತ್ತು ತಾಲ್ಲೂಕುಗಳಿವೆ. ಅದರಲ್ಲಿ ಬಳ್ಳಾರಿ ಮತ್ತು ಸಂಡೂರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಮತ್ತು ಸಿರುಗುಪ್ಪ ತಾಲ್ಲೂಕು
ಆಂಧ್ರದ ಕರ್ನೂಲ್ ಜಿಲ್ಲೆಗೆ ಗಡಿ ಹಂಚಿಕೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ 35 ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮದ್ಯ, ಹಣ ಸೇರಿದಂತೆ ಇನ್ನಿತರ ಸಾಗಾಣಿಕಾ ವಸ್ತುಗಳ ಮೇಲೆ ಕಣ್ಣಿಡಲಾಗಿದೆ’ ಎಂದರು.‘ಮದ್ಯ ಮತ್ತು ಹಣ ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲದೇ, ಗಡಿಯಲ್ಲಿ ಮದ್ಯ ಮಾರಾಟದಲ್ಲಿ ಹೆಚ್ಚಳ ಮತ್ತು ಸಾಗಾಣಿಕೆ ಪ್ರಮಾಣ ಹೆಚ್ಚಳದ ಕುರಿತು ಅನಂತಪುರ, ಕರ್ನೂಲ್ ಮತ್ತು ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳು ನಿತ್ಯ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು’ ಎಂದರು.

ಅನಂತಪುರ ವಲಯದ ಡಿಐಜಿ ಜೆ.ಪ್ರಭಾಕರ ರಾವ್, ಕರ್ನೂಲ್ ಜಿಲ್ಲಾಧಿಕಾರಿ ಎಸ್.ಸತ್ಯನಾರಾಯಣ ಮಾತನಾಡಿದರು.‘ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನೂಲ್, ಅನಂತಪುರ ಮತ್ತು ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕ ವಾಟ್ಸ್ಆ್ಯಪ್ ಗ್ರೂಪ್ರ ರಚಿಸಿದಲ್ಲಿ ಅನುಕೂಲವಾಗಲಿದೆ. ಕ್ಷಣಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದಾಗಿದೆ’ ಎಂದು ಡಾ.ರಾಮಪ್ರಸಾದ್ ಸಲಹೆ ನೀಡಿದರು. ಇದಕ್ಕೆ ಎಲ್ಲಾ ಅಧಿಕಾರಿಗಳು ಸಮ್ಮತಿ ಸೂಚಿಸಿದರು.

ADVERTISEMENT

ಎಸ್ಪಿ ಅರುಣ್ ರಂಗರಾಜನ್, ಅನಂತಪುರ ಜಿಲ್ಲಾಧಿಕಾರಿ ಜಿ.ಪಾಂಡಿಯಾನ್ ಉಪಸ್ಥಿತರಿದ್ದರು.

15 ಕೇಂದ್ರಗಳು

ಕೆ.ಬೆಳಗಲ್ಲು, ಇಟ್ಟಗಿಹಾಳ, ವಟ್ಟುಮುರಣಿ, ಮಾಟಸೂಗುರ, ಹಲಕುಂದಿ, ಎತ್ತಿನಬೂದಿಹಾಳ, ರೂಪನಗುಡಿ, ಚೆಳಗುರ್ಕಿ, ಜೋಳದರಾಶಿ ಕ್ರಾಸ್, ಕರೆಕಲ್ಲು, ಕೆ.ವೀರಾಪುರ, ಸಿಂಧವಾಳ ಕ್ರಾಸ್, ಜಾಲಿಹಾಳ, ಮೋತಲಕುಂಟಾ ಹಾಗೂ ಗಂಗಾಲಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.