ADVERTISEMENT

ಆಗ ಮೆರೆದವರು ಈಗ ನಾಪತ್ತೆ..!

ಸಿದ್ದಯ್ಯ ಹಿರೇಮಠ
Published 20 ಸೆಪ್ಟೆಂಬರ್ 2011, 8:35 IST
Last Updated 20 ಸೆಪ್ಟೆಂಬರ್ 2011, 8:35 IST

ಬಳ್ಳಾರಿ: ಕೆಲವೇ ತಿಂಗಳುಗಳ ಹಿಂದಿನ ಮಾತು. ಇವರ ಆದೇಶವಿಲ್ಲದೆ, ಅದಿರು ತುಂಬಿಕೊಂಡ ಒಂದೇ ಒಂದು ಲಾರಿ ಹೊಸಪೇಟೆ ಮತ್ತು ಸಂಡೂರುಗಳಿಂದ ಕದಲುತ್ತಿರಲಿಲ್ಲ. ಇವರ ಗಮನಕ್ಕೆ ಬಾರದೆ ಯಾವುದೇ ಗಣಿ ಮಾಲೀಕ ಅದಿರಿನ ವ್ಯಾಪಾರ ನಡೆಸುತ್ತಿರಲಿಲ್ಲ.

ಅದಿರು ತುಂಬಿಕೊಂಡು ಬಂದಿರಿನತ್ತ ಹೋದ ಲಾರಿಗಳ ಮಾಲೀಕರಿಗೆ ಇವರೇ ಬಾಡಿಗೆ ಪಾವತಿಸುತ್ತಿದ್ದರು. ಪ್ರತಿ ಅದಿರಿನ ಲಾರಿಗೆ ಇಂತಿಷ್ಟು ಎಂಬಂತೆ ಅಧಿಕಾರಿಗಳಿಗೆ ಇವರೇ ಮಾಮೂಲು ನಿಗದಿ ಮಾಡುತ್ತಿದ್ದರು.

ಅಷ್ಟೇ ಅಲ್ಲ, ಕೌಟುಂಬಿಕ ಕಲಹದಿಂದ ಬೇಸತ್ತು ಗಣಿಗಾರಿಕೆಯನ್ನೇ ಸ್ಥಗಿತಗೊಳಿಸಿದ್ದ ಅನೇಕ ಗಣಿ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಅವರೊಂದಿಗೆ ವ್ಯವಹಾರ ಕುದುರಿಸಿ, ರೈಸಿಂಗ್ ಕಾಂಟ್ರ್ಯಾಕ್ಟ್ ಪಡೆದು, ಅಕ್ರಮವಾಗಿ ಗಣಿಗಾರಿಕೆಯನ್ನೂ ನಡೆಸಿ, ಅದಿರನ್ನೂ ಸಾಗಿಸುತ್ತಿದ್ದ ಜವಾಬ್ದಾರಿ ಸಂಪೂರ್ಣ ಇವರದ್ದೇ ಆಗಿತ್ತು.

ಗಣಿ ವ್ಯವಹಾರದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಬಲಗೈ ಎಂದೇ ಗುರುತಿಸಿಕೊಂಡಿದ್ದ ಇವರ ಮನೆಗಳ ಮೇಲೇ ಸೋಮವಾರ ಸಿಬಿಐ ದಾಳಿ ನಡೆದಿದೆ.

ಹೊಸಪೇಟೆಯ ಖಾರದಪುಡಿ ಮಹೇಶ, ಸ್ವಸ್ತಿಕ್ ನಾಗರಾಜ ಹಾಗೂ ಸಂಡೂರಿನ ಎಸ್‌ಟಿಡಿ ಮಂಜುನಾಥ ಅವರೇ ಈ ಮೂವರಾಗಿದ್ದು, ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗುತ್ತಿದ್ದಂತೆಯೇ ಥರಗುಟ್ಟಿ ಹೋಗಿದ್ದ ಇವರು, ಜನಾರ್ದನರೆಡ್ಡಿ ಬಂಧನವಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದಾರೆ.

ಖಾರದಪುಡಿ ಮಹೇಶ: ಖಾರದಪುಡಿ ಮಾರುತ್ತಿದ್ದ ಕುಟುಂಬದ ಮಹೇಶ, ಮೊದಲು ಆಟೋ ಓಡಿಸುತ್ತ, ನಂತರದ ದಿನಗಳಲ್ಲಿ ಗಣಿ ಕೂಲಿಯಾಗಿಯೂ ಕೆಲಸ ಮಾಡಿದ್ದಾನೆ. ಬರಬರುತ್ತ ಗಣಿಯ ಆಳ- ಅಗಲವೆಲ್ಲವನ್ನೂ ಅರಿತು, ಜನಾರ್ದನರೆಡ್ಡಿ ಆಪ್ತನಾಗಿ ಹೊಸಪೇಟೆಯಲ್ಲಿ ಕುಖ್ಯಾತನಾದ.

ಬಳ್ಳಾರಿ ರೋಡ್ ಸರ್ಕಲ್ ಪ್ರದೇಶದಲ್ಲಿ ಚಿಕ್ಕ ಮನೆಯಲ್ಲಿ ಖಾರದಪುಡಿ ಕುಟ್ಟುವ ಯಂತ್ರದೊಂದಿಗೆ ವಾಸಿಸುತ್ತಿದ್ದ ಇವರ ಕುಟುಂಬ, ಇದೀಗ ಜೆ.ಪಿ. ನಗರದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭಾರಿ ಬಂಗಲೆ ಹೊಂದಿದೆ. ಈತನ ಬ್ಯಾಂಕ್ ಖಾತೆಯಲ್ಲಿ ನೂರಾರು ಕೋಟಿ ಇರುವುದು ವಿಶೇಷ.

ಲೋಕಾಯುಕ್ತರ ವರದಿ ಪ್ರಕಾರ ಗಣಿಗಾರಿಕೆ, ಅದಿರು ಸಾಗಣೆ, ಅತಿಥಿಗಳ ಸತ್ಕಾರ, ಲೇವಾ-ದೇವಿ ಕುರಿತಂತೆ ಜನಾರ್ದನರೆಡ್ಡಿ ಮತ್ತಿತರರ ಬಹುತೇಕ ಹಣಕಾಸಿನ ವ್ಯವಹಾರವನ್ನು ಈತನೇ ನಿರ್ವಹಿಸಿದ್ದು, ಅವೆಲ್ಲವುಗಳನ್ನೂ ಕಂಪ್ಯೂಟರ್‌ನಲ್ಲಿ ದಾಖಲಿಸಿದ್ದಾನೆ.

ಸ್ವಸ್ತಿಕ್ ನಾಗರಾಜ್: ಸ್ವಸ್ತಿಕ್ ಹೆಸರಿನ ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿ ಹೊಂದಿರುವ ವ್ಯಾಪಾರಸ್ಥರ ಕುಟುಂಬದ ನಾಗರಾಜ್, ಸದ್ಯ ಹೊಸಪೇಟೆ ನಗರಸಭೆ ಸದಸ್ಯ.

ಈ ಮೊದಲು ನಗರಸಭೆಯ ಉಪಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದು, ಹೊಸಪೇಟೆ ಹೊರವಲಯದಲ್ಲಿ `ಸ್ವಸ್ತಿಕ್ ಮೆದು ಕಬ್ಬಿಣ ಉತ್ಪಾದನಾ ಘಟಕ~ವನ್ನೂ ಅಳವಡಿಸಿರುವುದು ವಿಶೇಷ.

ಅದಿರು ಲಾರಿಗಳು ಬಂದರುಗಳಿಗೆ ತಲುಪುವವರೆಗಿನ ರಿಸ್ಕ್ ವ್ಯವಹಾರ, ರೈಸಿಂಗ್ ಕಾಂಟ್ರ್ಯಾಕ್ಟ್‌ನಲ್ಲಿ ಜನಾರ್ದನರೆಡ್ಡಿಗೆ ನೆರವು ನೀಡಿರುವುದು ಪ್ರಮುಖ ಆರೋಪ. 1988ರಲ್ಲಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಇವರ ಕುಟುಂಬದ ಕೆಲವು ಸದಸ್ಯರು ಇನ್ನೂ ಊರಿಗೆ ಮರಳಿಲ್ಲ. ನೂರಾರು ಕೋಟಿ ಸಂಪಾದಿಸಿ ಕೆಲವು ತಿಂಗಳುಗಳ ಹಿಂದೆ ಗಣಿ ಮಾಲೀಕರಲ್ಲಿ ತಲ್ಲಣ ಉಂಟುಮಾಡಿದ್ದ ಕುಖ್ಯಾತಿ ನಾಗರಾಜ್‌ಗಿದೆ.

ಪರ್ಮಿಟ್‌ರಹಿತ ಅದಿರು ಲಾರಿ ತಡೆದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೀಡಲು `ಸ್ವಸ್ತಿಕ್~ ಕಾರ್ಡ್ ಎಂದೇ ಹೆಸರಿಸಿ, ಚಾಲಕರ ಕೈಗಿಡುತ್ತಿದ್ದುದಲ್ಲದೆ, ಆ ಕಾರ್ಡ್‌ಗಳನ್ನು ತಂದವರಿಗೆ ಹಣ ಸಂದಾಯ ಮಾಡುತ್ತಿದ್ದ ಎಂಬ ಆರೋಪವೂ ಇದೆ.

ಎಸ್‌ಟಿಡಿ ಮಂಜುನಾಥ: ಆಂಧ್ರಪ್ರದೇಶದಿಂದ ಸಂಡೂರಿಗೆ ವಲಸೆ ಬಂದು, ಎಸ್‌ಟಿಡಿ ಬೂತ್ ಇರಿಸಿಕೊಂಡಿದ್ದ ಮಂಜುನಾಥ, ಬಹುತೇಕರಿಗೆ `ಎಸ್‌ಟಿಡಿ ಮಂಜು~ ಎಂದೇ ಚಿರಪರಿಚಿತ.
ಮೊದಲು ಅನಿಲ್ ಲಾಡ್ ಹಾಗೂ ಸಂತೋಷ್ ಲಾಡ್ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿ, ನಂತರ ಜನಾರ್ದನರೆಡ್ಡಿ ಪಾಳಯಕ್ಕೆ ಜಿಗಿದ ಈತ,  ಇತ್ತೀಚಿನವರೆಗೂ ಬಿಜೆಪಿಯ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದ.

ಸ್ವಸ್ತಿಕ್ ನಾಗರಾಜ್ ಹಾಗೂ ಖಾರದಪುಡಿ ಮಹೇಶ ಅವರಿಗೂ ಆಪ್ತನಾಗಿ, ಸಂಡೂರು ಭಾಗದ ಗಣಿಗಳಿಂದ ಅದಿರು ಸಾಗಿಸುವ ಟ್ರಾನ್ಸ್‌ಪೋರ್ಟ್ ವ್ಯವಹಾರ ಮಾಡುತ್ತಿದ್ದುದಲ್ಲದೆ, 50ಕ್ಕೂ ಹೆಚ್ಚು ನಿರುದ್ಯೋಗಿ ಯುವಕರನ್ನು ಜತೆಗಿರಿಸಿಕೊಂಡು, ಮೊಬೈಲ್, ಬೈಕ್ ನೀಡಿ, ರಿಸ್ಕ್ ವ್ಯವಹಾರ ನೋಡಿಕೊಳ್ಳುತ್ತಿದ್ದ.
ಲೋಕಾಯುಕ್ತ ವರದಿ ಬಂದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಉಳಿದಿದ್ದ ಈತ ರೆಡ್ಡಿ ಬಂಧನದ ನಂತರ ಕಣ್ಮರೆ ಆಗಿದ್ದಾನೆ.

ಈ ಮೂವರೂ ಬೆಂಗಳೂರು ಮತ್ತಿತರ ಕಡೆ ಬಂಗಲೆಗಳನ್ನೂ ಹೊಂದಿದ್ದು, ಅಲ್ಲೇ ವ್ಯಾಪಾರ ವ್ಯವಹಾರ ಆರಂಭಿಸಿದ್ದಾರೆ ಎಂಬ ವದಂತಿಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.