ADVERTISEMENT

ಆದಾಯ ಪ್ರಮಾಣಪತ್ರ ಮಿತಿ ರದ್ದತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 5:20 IST
Last Updated 21 ಜುಲೈ 2012, 5:20 IST

ಬಳ್ಳಾರಿ: ಹಿಂದುಳಿದ ಜಾತಿಗಳ ಪ್ರವರ್ಗ- 1ರಲ್ಲಿ ಬರುವ ಅನೇಕ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣ ಮತ್ತಿತರ ಸರ್ಕಾರಿ ಸೌಲಭ್ಯ ಪಡೆಯಲು ಅಗತ್ಯವಿರುವ ಆದಾಯ ಪ್ರಮಾಣಪತ್ರ ಪಡೆಯಲು ಆದಾಯ ಮಿತಿಯನ್ನು ರೂ 1 ಲಕ್ಷಕ್ಕೆ ನಿಗದಿ ಪಡಿಸಿರುವ ಕ್ರಮವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ.

ಪಿಂಜಾರ, ಉಪ್ಪಾರ, ಯಾದವ, ಗಂಗಾಮತಸ್ಥ ಮತ್ತಿತರ ಸಮುದಾಯಗಳಿಗೆ ಸೇರಿದ ಕೆಲವು ಮುಖಂಡರು ಈ ಕುರಿತ ಮನವಿಯನ್ನು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಾದವ ಸಮುದಾಯದ ಮುಖಂಡ ಪಿ.ಗಾದೆಪ್ಪ, ಆರ್ಥಿಕ ವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಈ ಸಮುದಾಯಗಳ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ ಪಡೆಯಲು ಅಗತ್ಯವಿರುವ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಈವರೆಗೆ ಅವರ ಪಾಲಕರ ಆದಾಯದಲ್ಲಿ ಮಿತಿ ಇರಲಿಲ್ಲ. ಆದರೆ, ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆಯವರು ಮಿತಿಯನ್ನು ರೂ 1 ಲಕ್ಷಕ್ಕೆ ನಿಗದಿಪಡಿಸಿರುವುದು ಸಮಸ್ಯೆಯಾಗಿ ತಲೆದೋರಲಿದೆ ಎಂದರು.

ಪ್ರವರ್ಗ 1ರ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ನಿಯಮವನ್ನು ಸರ್ಕಾರ 1982ರಲ್ಲಿ ಜಾರಿಗೆ ತಂದಿದ್ದು, ಆದಾಯ ಮಿತಿಯನ್ನು ನಿಗದಿಪಡಿಸಿರಲಿಲ್ಲ. ಆದರೆ, ಪ್ರಸಕ್ತ ಸಾಲಿನಿಂದ ಅಲೆಮಾರಿಯಾಗಿರುವ, ಬಡತನದಿಂದ ಬಳಲುತ್ತಿರುವ ಈ ಸಮುದಾಯದ ಜನ ಪಡೆಯುವ ಆದಾಯ ಪ್ರಮಾಣ ಪತ್ರಕ್ಕೆ ರೂ 1 ಲಕ್ಷದ ಮಿತಿಯನ್ನು ನಿಗದಿ ಮಾಡಿರುವುದು ಖಂಡನೀಯ ಎಂದರು.

ಈ ಕುರಿತು ಆದೇಶ ಹೊರಡಿಸುವಾಗ ಸಮರ್ಪಕವಾದ ಸಮೀಕ್ಷೆ ನಡೆಸದೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ನಾರಾಯಣ ಸ್ವಾಮಿ ಅವರಿಗೆ ಈ ಕುರಿತ ಮನವಿ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯವರ ಬಳಿ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸ ಲಾಗುವುದು ಎಂದು ಅವರು ಹೇಳಿದರು.

ಉಪ್ಪಾರ, ಗೊಲ್ಲ, ಬೆಸ್ತ, ಬಾರ್ಕಿ, ಪಿಂಜಾರ, ಹೆಳವ, ಗೊಂದಲಿ, ತಳವಾರ ಮತ್ತಿತರ ಅತ್ಯಂತ ಹಿಂದುಳಿದ ಸಮುದಾಯದ ಅನೇಕರು ಅಲೆಮಾರಿ ಜೀವನ ನಡೆಸುತ್ತಿದ್ದು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿಲ್ಲ. ಸರ್ಕಾರದ ಈ ಆದೇಶದಿಂದಾಗಿ ಈ ಸಮುದಾಯಗಳ ವಿದ್ಯಾರ್ಥಿಗಳು ಮತ್ತು ಯುವಕರು ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲರಾಗುತ್ತಾರೆ ಎಂದು ಪಿ. ಗಾದೆಪ್ಪ ಅವರು ಅವಲತ್ತುಕೊಂಡರು.ಈ ಸಂದರ್ಭದಲ್ಲಿ ಪಾಲ್ತೂರು ಶರ್ಮಶ್ ಅಲಿ, ತಿಮ್ಮಪ್ಪ, ಬಿ.ಮೌಲಾ ಅಲಿ, ಎಂ.ಸಿದ್ದಪ್ಪ, ಎಂ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.