ADVERTISEMENT

ಆರೋಗ್ಯ ಕೇಂದ್ರಕ್ಕೆ ವೈದ್ಯರೇ ಇಲ್ಲ

ಹೊಳಲು ಆಸ್ಪತ್ರೆಯ ಅವ್ಯವಸ್ಥೆ: ತಾಪಂ ಸಭೆಯಲ್ಲಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:01 IST
Last Updated 19 ಡಿಸೆಂಬರ್ 2012, 8:01 IST
ಹೂವಿನಹಡಗಲಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಶಾಸಕ ಚಂದ್ರಾನಾಯ್ಕ ಮಾತನಾಡಿದರು.  ಅಧ್ಯಕ್ಷೆ ದುರುಗಮ್ಮ,  ಕಾರ್ಯನಿರ್ವಹಣಾಧಿಕಾರಿ ಮೇಘಾ ನಾಯ್ಕ ಇದ್ದಾರೆ.
ಹೂವಿನಹಡಗಲಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಶಾಸಕ ಚಂದ್ರಾನಾಯ್ಕ ಮಾತನಾಡಿದರು. ಅಧ್ಯಕ್ಷೆ ದುರುಗಮ್ಮ, ಕಾರ್ಯನಿರ್ವಹಣಾಧಿಕಾರಿ ಮೇಘಾ ನಾಯ್ಕ ಇದ್ದಾರೆ.   

ಹೂವಿನಹಡಗಲಿ:`ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರೇ ಇಲ್ಲ, ಕೇವಲ  ಶುಶ್ರೂಷಕಿಯರಷ್ಟೇ  ಕೇಂದ್ರದಲ್ಲಿದ್ದಾರೆ. ವೈದ್ಯರು ಬಂದ ಹೋಗಿ ಎರಡು ತಿಂಗಳಾಗಿದೆ ' ಎಂದು ತಾ.ಪಂ. ಸದಸ್ಯ ಹರವಿ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯರಿಲ್ಲದೆ ಹೊಳಲು ಮತ್ತು ಸುತ್ತಮುತ್ತಲಿನ ಗ್ರಾಮದ ಜನತೆಗೆ ಸಮಸ್ಯೆಯಾಗಿದೆ ಎಂದು ದೂರಿದರು. `ಡಾ.ಪಿ.ಬಿ.ನಾಯ್ಕ ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿಗಳಾಗಿದ್ದಾರೆ.

ಜೊತೆಗೆ ಕೊಟ್ಟೂರು ಆರೋಗ್ಯ ಕೇಂದ್ರಕ್ಕೂ ಪ್ರಭಾರ ವೈದ್ಯಾಧಿಕಾರಿ ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಗ್ರಾಮಕ್ಕೆ ಬಂದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಶೀಘ್ರವೇ ವೈದ್ಯರು ಪೂರ್ಣ ಪ್ರಮಾಣದಲ್ಲಿ ಹೊಳಲು ಗ್ರಾಮದಲ್ಲಿ ಕಾರ್ಯನಿರ್ವಹಿಸಬೇಕು ಇಲ್ಲವಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ' ಎಂದು ಎಚ್ಚರಿಸಿದರು.

`ತಾಲ್ಲೂಕಿನ ಮಾಗಳ ಗ್ರಾಮ ಹೊರವಲಯದ ಐಯ್ಯನ ಹಳ್ಳಿಪ್ಲಾಟ್ ವಿದ್ಯುತ್ ಪರಿವರ್ತಕ ಬೀಳುವ ಸ್ಥಿತಿಯಲ್ಲಿದೆ. 15 ಕುಟುಂಬಗಳು ಅಪಾಯದಲ್ಲಿವೆ ಈವರೆಗೂ ದುರಸ್ತಿ ಕೆಲಸ ಮಾಡದೇ ಅನಾಹುತವಾದರೆ ಜೆಸ್ಕಾಂನವರೇ ಜಾವಾಬ್ದಾರರು' ಎಂದು ತಾ.ಪಂ.ಅಧ್ಯಕ್ಷೆ ದುರುಗಮ್ಮ  ದೂರಿದರು.

`ತಾಲ್ಲೂಕಿನ ಉತ್ತಂಗಿ, ಕಗ್ಗಲಗಟ್ಟಿತಾಂಡಾ ಇನ್ನು ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ ಪ್ರತೀ ಸಭೆಯಲ್ಲಿಯೂ ಈ ಕುರಿತು ಪ್ರಸ್ತಾಪಿಸಲಾಗಿದೆ. ಆದರೂ ಸಮಸ್ಯೆ ಹಾಗೇ ಉಳಿದಿದೆ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಿರಿ' ಎಂದು ತಾ.ಪಂ.ಸದಸ್ಯ ಐಗೋಳ್ ಚಿದಾನಂದ ಪ್ರಶ್ನಿಸಿದರು.

ತಾ.ಪಂ.ಸದಸ್ಯೆ ಸಾವಿತ್ರಮ್ಮ ಮಾತನಾಡಿ ಉತ್ತಂಗಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಾ.ಪಂ.ಸಭೆಯಲ್ಲಿ ಮಾತನಾಡುವುದಾಗಿದೆ ಹೊರತು ಈವರೆಗೂ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕ್ರಿಯಾ ಯೋಜನೆ ಕಳಿಸಬೇಕು ಮಂಜೂರಾತಿ ದೊರಕಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳು ಉತ್ತರಿಸಿದರು.

ಬಲ್ಬ ಮತ್ತು ಚಿಕ್ಕ ಪುಟ್ಟ ವಸ್ತುಗಳನ್ನು ಖರಿದಿಸಲು ತಾ.ಪಂ.ನಿಂದ ಲಕ್ಷಾನುಗಟ್ಟಲೆ ಹಣ ಖರ್ಚುಮಾಡುತ್ತೀರಿ ಅತೀ ಅವಶ್ಯವಿರುವ ಕುಡಿಯುವ ನೀರಿನ ಸಮಸ್ಯೆಗೆ ಒಂದು ಬೋರ್ ಕೊರೆಯಿಸಿ ಅಥವಾ ಪೈಪ್‌ಲೈನ್ ಮಾಡಿಸಿ ನೀರು ಕೊಡಲು ಕಾಯ್ದೆ ಕಾನೂನು ಮಾತನಾಡುತ್ತೀರಿ ಎಂದು ಚಿದಾನಂದ ದೂರಿದರು.

ತಾಲ್ಲೂಕಿನ ಲಿಂಗನಾಯ್ಕನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಪದೇ ಪದೇ ಈ ವಿಷಯ ಕುರಿತು ಪ್ರಸ್ತಾಪಿಸಲಾಗಿದೆ ಸಮಸ್ಯೆ ಹಾಗೇ ಉಳಿದಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಶಿಲ್ಪಾ ರಾಟೋಡ್ ಪ್ರಶ್ನಿಸಿದರು.

ನಿರ್ಮಿತಿ ಕೇಂದ್ರದಿಂದ ಕೈಗೊಂಡಿರುವ ಅಂಗನವಾಡಿ ಕೇಂದ್ರಗಳು ಹಾಗೂ ಯಾತ್ರಿ ನಿವಾಸಗಳ ಕಾಮಗಾರಿ ಕೆಲಸ ವಿಳಂಬವಾಗುತ್ತಿವೆ ಕೆಲಸ ಆರಂಭಿಸಿ ಬಿಲ್ ಮಾಡಿಸಿಕೊಂಡು ಹೋಗಿದ್ದಾರೆ ಎಂದು ತಾ.ಪಂ.ಸದಸ್ಯರು ಸಭೆಯಲ್ಲಿ ದೂರಿದರು.

ಶಾಸಕ ಚಂದ್ರಾನಾಯ್ಕ ಮಾತನಾಡಿ ಕೆಲಸ ಮುಂದಿನ ಸಭೆಗೆ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೆಶಕರನ್ನು ಕರೆಯಿಸಿ ಸರಿಯಾದ ಮಾಹಿತಿ ಪಡೆಯಬೇಕು ಕೆಲಸ ಮಾಡುವುದಾದರೆ ಸರಿಯಾಗಿ ಮಾಡಲಿ ಇಲ್ಲವಾದರೆ ಬೇರೆಯವರಿಗೆ ಒಪ್ಪಿಸಿ ಹೋಗಲಿ ಎಂದು ಹೇಳಿದರು.

ತಾ.ಪಂ.ಸಭೆಗೆ ಅಧಿಕಾರಿಗಳು ಪದೇ ಪದೇ ಗೈರಾಗುತ್ತಿದ್ದಾರೆ ಬರುವ ಸಭೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿರು.ಶಾಸಕ ಚಂದ್ರಾನಾಯ್ಕ, ತಾ.ಪಂ.ಅಧ್ಯಕ್ಷೆ ದುರುಗಮ್ಮ, ತಾ.ಪಂ.ಕಾರ್ಯನಿರ್ವಾಹಕಾದಿಕಾರಿ ಮೇಘಾನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT