ADVERTISEMENT

ಇತಿಹಾಸದ ಅರಿವು ಹೊಂದಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:25 IST
Last Updated 5 ಫೆಬ್ರುವರಿ 2011, 7:25 IST

ಕೂಡ್ಲಿಗಿ: ಹಿಂದಿನ ಇತಿಹಾಸವನ್ನು ಅರಿಯದೆ ಮುಂದಿನ ಭವಿಷ್ಯವನ್ನು ನಿರ್ಧರಿಸುವುದು ಸಾಧ್ಯವಿಲ್ಲ ಎಂಬ ವಿದ್ವಾಂಸರ ಅಭಿಮತದಂತೆ ವಿದ್ಯಾರ್ಥಿ ಗಳು ಇತಿಹಾಸದ ಕಿಂಚಿತ್ತಾದರೂ ಅರಿವನ್ನು ಹೊಂದಿರಬೇಕಾದುದು ಅತ್ಯವಶ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ಎಂ.ವೀರೇಶ್ ತಿಳಿಸಿದರು.ಅವರು ಇತ್ತೀಚೆಗೆ ಪಟ್ಟಣದ ಶ್ರೀ ರೇಣುಕ ಸಂ.ಪ.ಪೂ ಕಾಲೇಜಿನಲ್ಲಿ ವಂದೇಮಾತರಂ ಜನಜಾಗೃತಿ ವೇದಿಕೆ ಏರ್ಪಡಿಸಿದ್ದ ನೇತಾಜಿ ಸುಭಾಸ ಚಂದ್ರ ಬೋಸರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ ನೇತಾಜಿ ಬಹಳಷ್ಟು ಶ್ರಮಿಸಿದರು. ಆಜಾದ್ ಹಿಂದ್ ಫೌಜನ್ನು ನಿರ್ಮಿಸಿದರು. ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಯುದ್ಧವೇ ಮದ್ದು ಎಂದು ಅವರು ತಿಳಿದಿದ್ದರು.

ವಿವಿಧ ರಾಷ್ಟ್ರಗಳ ನೆರವಿನೊಂದಿಗೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಬೇಕೆಂದು ಅವರು ಬಯಸಿದ್ದರು. ಬ್ರಿಟಿಷರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು, ಭಾರತೀಯ ಬಳಿ ಸ್ಥಳೀಯ ಪರಿಕರಗಳಿದ್ದವು. ಆದರೆ ಭಾರತದ ಪ್ರತಿಯೊಬ್ಬ ಸೈನಿಕನಲ್ಲೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬೇಕೆಂಬ ಕೆಚ್ಚೆದೆ ಇತ್ತು ಎಂದು ಅವರು ವಿವರಿಸಿದರು.

ಯುವಜನಾಂಗದಲ್ಲಿ ದೇಶಭಕ್ತಿಯ ಕೊರತೆಯಿದೆ, ನೇತಾಜಿ, ಚಂದ್ರಶೇಖರ್ ಆಜಾದ್‌ರಂತಹ ಕೆಚ್ಚೆದೆಯ ಕಲಿಗಳ ಕುರಿತು ಹೇಳಬೇಕಾದ ಅಗತ್ಯತೆಯಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ್, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹನೀಯರ ಕುರಿತ ಪ್ರಸಂಗಗಳನ್ನು ಹೇಳಬೇಕಾಗಿದೆ ಎಂದರು. ದೇಶಭಕ್ತರು ಮುನ್ನಡೆದ ಮಾರ್ಗವನ್ನು ಯುವಜನತೆಯೂ ಅನುಸರಿಸಬೇಕಾಗಿದೆ ಎಂದರು.

ಉಪನ್ಯಾಸಕ ನಾಗನಗೌಡ ಮಾತನಾಡಿದರು.ಪ್ರಾಚಾರ್ಯರಾದ ಟಿ.ಎಂ.ಸೋಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪ.ಪಂ ಸದಸ್ಯ ಷಫಿವುಲ್ಲಾ ಹಾಜರಿದ್ದರು.
ಪ್ರಾಸ್ತಾವಿಕವಾಗಿ ವೇದಿಕೆಯ ಅಧ್ಯಕ್ಷ ವಿ.ಜಿ.ವೃಷಭೇಂದ್ರ ಮಾತ ನಾಡಿದರು. ಸತೀಶ ಪ್ರಾರ್ಥಿಸಿದರು. ರಾಘವೇಂದ್ರ ಸ್ವಾಗತಿಸಿದರು. ನಿಂಗೇಶ್ ವಂದಿಸಿದರು. ರಾಘವೇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.