ADVERTISEMENT

ಉತ್ತಮ ಭವಿಷ್ಯ ಅರಸುತ್ತಿರುವ ಬಾಲಕಾರ್ಮಿಕರು

ಕೇಂದ್ರ ಸಚಿವ ಖರ್ಗೆ ಆಗಮನದ ನಿರೀಕ್ಷೆ...

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:20 IST
Last Updated 15 ಡಿಸೆಂಬರ್ 2012, 6:20 IST
ಉತ್ತಮ ಭವಿಷ್ಯ ಅರಸುತ್ತಿರುವ ಬಾಲಕಾರ್ಮಿಕರು
ಉತ್ತಮ ಭವಿಷ್ಯ ಅರಸುತ್ತಿರುವ ಬಾಲಕಾರ್ಮಿಕರು   

ಬಳ್ಳಾರಿ: ಈತನ ಹೆಸರು ಸಂತೋಷ. ವಯಸ್ಸು 10 ವರ್ಷ. ಗದುಗಿನ ರೈಲು ನಿಲ್ದಾಣದ ಬಳಿಯ ಕೊಳೆಗೇರಿಯ ನಿವಾಸಿ.

ನಿತ್ಯವೂ ಅಲ್ಲಿನ ಬಸ್ ನಿಲ್ದಾಣದ ಎದುರಿನ ಚಿಕನ್ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತ, ಕೋಳಿಯ ಕತ್ತು ಕುಯ್ದು, ಪುಚ್ಚ ಕತ್ತರಿಸಿ, ಸ್ವಚ್ಛಗೊಳಿಸಿ ಮಾಲೀಕನಿಗೆ ನೀಡುತ್ತ ರೂ 50 ಸಂಬಳ ಪಡೆದು, ಮನೆಗೆ ಮರಳುತ್ತಿದ್ದ. ಈತನಿಗೆ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ. ಇದು ಒಂಭತ್ತು ತಿಂಗಳ ಹಿಂದಿನ ಮಾತು.

ಆದರೆ, ಇದೀಗ ಈತ ನಗರದ ನವಜೀವನ ಸಂಸ್ಥೆಯ ಬಾಲ ಕಾರ್ಮಿಕ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದು, ಓದು- ಬರಹ ಕಲಿತು ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಹೊತ್ತಿದ್ದಾನೆ.

ಗದುಗಿನ ಸೆಟ್ಲ್‌ಮೆಂಟ್ (ಗಾಂಧಿನಗರ)ದಲ್ಲಿರುವ ಈತನ ದೊಡ್ಡಮ್ಮನ ಮಗಳಾದ ಎಲಿಜಬೆತ್ ಕೂಡ ಈತನೊಂದಿಗೆ ಪ್ರವೇಶ ಪಡೆದಿದ್ದಾಳೆ. 9ರ ಪ್ರಾಯದ ಆ ಹುಡುಗಿಗೂ ಭವಿಷ್ಯದ ಕುರಿತು ಅರಿವು ಮೂಡಿದೆ.

ಇಂಥವೇ ಇನ್ನೂ 36 ಮಕ್ಕಳು ಈ ಶಾಲೆಯಲ್ಲಿದ್ದಾರೆ. ಇವರೆಲ್ಲ ಇಲ್ಲಿಗೆ ಬರುವುದಕ್ಕಿಂತ ಮೊದಲು ತಮ್ಮ ಭವಿಷ್ಯದ ಬಗ್ಗೆ ಎಳ್ಳಷ್ಟೂ ಆಲೋಚನೆಯನ್ನೇ ಹೊಂದಿರಲಿಲ್ಲ.

ಅಲ್ಲಿ- ಇಲ್ಲಿ ಕೆಲಸ ಮಾಡಿಕೊಂಡಿದ್ದ ಈ ಮಕ್ಕಳನ್ನು ಶಾಲೆಗೂ ಸೇರಿಸದೆ ಬಿಟ್ಟಿದ್ದ ಅವರ ಪಾಲಕರಿಗೂ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರಲಿಲ್ಲ. ಇಂತಿಪ್ಪ ಈ ಮಕ್ಕಳೆಲ್ಲರೂ ಇದೀಗ ಉತ್ತಮ ನಾಳೆಗಳ ಕುರಿತು ಆಲೋಚನೆ ಮಾಡುವಷ್ಟು ಬದಲಾಗಿದ್ದಾರೆ. ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಕಾಣುತ್ತಿರುವ ಇವರು ಶುಕ್ರವಾರ ಅತ್ಯಂತ ಸಂಭ್ರಮದಲ್ಲಿದ್ದಾರೆ.

ಅದಕ್ಕೆ ಕಾರಣ, ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ. ಶನಿವಾರ ಬೆಳಿಗ್ಗೆ 9.30ಕ್ಕೆ ಈ ಶಾಲೆಗೆ ಸಚಿವರು ಭೇಟಿ ನೀಡಿ, ಈ ಮಕ್ಕಳೊಂದಿಗೆ ಸಂವಾದ ನಡೆಸುವ ಸಮಾರಂಭ ಏರ್ಪಡಿಸಿರುವುದರಿಂದ ಅವರೆಲ್ಲರಿಗೂ ಕುತೂಹಲ ಮೂಡಿದೆ.

ಬಳ್ಳಾರಿಯ ಬಾಪೂಜಿ ನಗರ, ದೇವಿನಗರ ಮತ್ತಿತರ ಪ್ರದೇಶಗಳ ಮಕ್ಕಳು ಈ ಶಾಲೆಯಲ್ಲಿದ್ದು ಅವರ ಪೈಕಿ, ಕಾವೇರಿ, ಇಂದ್ರಾಣಿ, ಬಾಲು, ಕವಿತಾ, ಸಚಿನ್, ಚಿನ್ನ, ದರ್ಶನ್, ನಿಕಿತಾ, ಸಾಗರ್, ಎಸ್ತರ್‌ರಾಣಿ, ಪವನ್, ಹರ್ಷಿತ್, ಮನ್, ಗೀತಾ ಮತ್ತಿತರರು ಸಚಿವ ಖರ್ಗೆ ಅವರನ್ನು ಸ್ವಾಗತಿಸಿ, ಅವರೊಂದಿಗೆ ಮಾತನಾಡುವ ಇರಾದೆ ಹೊಂದಿದ್ದಾರೆ.

`ಕಾರ್ಮಿಕ ಇಲಾಖೆ ಹಾಗೂ ಚೈಲ್ಡ್‌ಲೈನ್ ಸಹಾಯವಾಣಿಯ ನೆರವಿನಿಂದ ಇಲ್ಲಿ ಪ್ರವೇಶ ಪಡೆದಾಗ ಮೊದಮೊದಲು ಮನೆಗೆ ಮರಳಿ ಕಳುಹಿಸುವಂತೆ ಹಠ ಹಿಡಿಯುತ್ತಿದ್ದ ಮಕ್ಕಳ ಮನವೊಲಿಸಿ, ಅವರ ಬದುಕಿಗೂ ಒಂದು ಅರ್ಥ ಕಲ್ಪಿಸಿಕೊಡಬೇಕೆಂದೇ ಶ್ರಮಿಸಲಾಗುತ್ತಿದೆ' ಎಂದು ಶಾಲೆಯ ಮುಖ್ಯಸ್ಥೆ ಸಿಸ್ಟರ್ ವಿಕ್ಟೋರಿಯಾ ಹಾಗೂ ಸಿಸ್ಟರ್ ಲಿಯೋ, ಸಿಸ್ಟರ್ ಸಿಮಿ `ಪ್ರಜಾವಾಣಿ'ಗೆ ತಿಳಿಸಿದರು.

ಕೆಲವು ಪಾಲಕರು ಮಕ್ಕಳ ಭೇಟಿಗಾಗಿ ತಿಂಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ಭೇಟಿ ನೀಡುತ್ತಾರೆ. ಹಬ್ಬದ ಸಂದರ್ಭ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತದೆ. ಬಡತನದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾಗ ಸೊರಗಿದಂತೆ ಕಂಡುಬರುವ ಮಕ್ಕಳು ಇಲ್ಲಿಗೆ ಬಂದ ನಂತರ ಸದೃಢರಾಗುತ್ತಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಈ ಚಿಣ್ಣರಲ್ಲಿ ಕೆಲವರು ಬಾಲ ಕಾರ್ಮಿಕರು, ಇನ್ನು ಕೆಲವರು ಕಳ್ಳತನದ ಚಟ ಅಂಟಿಸಿಕೊಂಡು ಸಮಾಜಕ್ಕೆ ಕಂಟಕರಾಗಲಿದ್ದವರು, ತಂದೆ ಅತವಾ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿ ಇರುವವರಿದ್ದಾರೆ. ಇವರೆಲ್ಲರ ಬದುಕು ಹಸನು ಮಾಡಲು ಸಂಸ್ಥೆಯೂ ಶ್ರಮಿಸುತ್ತಿದೆ. ಸಮಾಜವೂ ಸಹಕರಿಸುತ್ತಿದೆ. ಶಿಕ್ಷಣ ಇವರ ಜೀವನದಲ್ಲಿ ಉತ್ತಮ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಅಂಗವಿಕಲ ಮಕ್ಕಳಿಗೆ ಆಸರೆ ನೀಡಿ ನಡೆಸಲಾಗುತ್ತಿದ್ದ ಈ ಶಾಲೆಯಲ್ಲಿ ಕಳೆದ ಫೆಬ್ರುವರಿ 6ರಂದು ಬಾಲ ಕಾರ್ಮಿಕರ ಶಾಲೆ ಆರಂಭಿಸಲಾಗಿದ್ದು, ಇದಕ್ಕೆ ರಾಷ್ಟ್ರೀಯ ಬಾಲಕಾರ್ಮಿಕ ಸಂಸ್ಥೆಯ ಅನುದಾನ ದೊರೆಯುತ್ತದೆ. ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರೇ ಆ ಹಣಕಾಸಿನ ನೆರವು ಬಿಡುಗಡೆ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು.

ಈ ಮಕ್ಕಳಿಗೆ ಹಾಸಿಗೆ, ಹೊದಿಕೆ, ಮಂಚ, ಕುರ್ಚಿ, ಪಾಠೋಪಕರಣಗಳು, ಸಾಮೂಹಿಕ ಪ್ರಾರ್ಥನಾ ಮಂದಿರ, ಸಾಂಸ್ಕೃತಿಕ ಭವನದ ಅಗತ್ಯವಿದೆ. ಕಟ್ಟಿಸಲು ಜಾಗೆ ಇದ್ದರೂ ಹಣದ ಕೊರತೆ ಇದೆ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಕೋರಿದರೂ ದೊರೆತಿಲ್ಲ ಎಂದು ಅವರು ನೊಂದು ನುಡಿದರು.

ಕೇಂದ್ರ ಸಚಿವ ಖರ್ಗೆ ಅವರು ಭೇಟಿ ನೀಡಿದ ಸಂದರ್ಭ ಮಕ್ಕಳೇ ಇದೆಲ್ಲವನ್ನೂ ಹೇಳಲು ಅಣಿಯಾಗಿದ್ದು, ನೆರವು ನೀಡುವಂತೆ ಕೋರುವ ತಯಾರಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.