ADVERTISEMENT

‘ಉದ್ಯಮಶೀಲತೆ ರೂಢಿಸಿಕೊಳ್ಳಿ’

‘ಮಹಿಳೆಯರಿಗೆ ಪ್ರತ್ಯೇಕ ಕೈಗಾರಿಕಾ ಪಾರ್ಕ್‌’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 5:59 IST
Last Updated 12 ಅಕ್ಟೋಬರ್ 2017, 5:59 IST

ಬಳ್ಳಾರಿ: ‘ವಿವಿಧ ಇಲಾಖೆಗಳ ನೆರವು, ಸಹಾಯಧನ ಪಡೆದು ಮಹಿಳೆಯರು ಬೃಹತ್‌ ಉದ್ದಿಮೆಗಳನ್ನು ಸ್ಥಾಪಿಸಿ ಯಶಸ್ಸು ಪಡೆಯಬಹುದು’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾವತಿ ಸಲಹೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಗರದ ಬಿಡಿಎಎ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಮಹಿಳಾ ಉದ್ದಿಮೆದಾರರ ಸಮಾವೇಶ ಮತ್ತು ಉದ್ಮಶೀಲತೆ ಮಾಹಿತಿ ಶಿಬಿರ’ದಲ್ಲಿ ಮಾತನಾಡಿದ ಅವರು, ‘ಕಿರು ಉದ್ದಿಮೆಗಳನ್ನು ನಡೆಸುತ್ತಿರುವ ಮಹಿಳೆಯರು ಸರ್ಕಾರದ ನೆರವು ಪಡೆದು ಬೃಹತ್‌ ಮಟ್ಟದಲ್ಲಿ ವಿಸ್ತರಿಸಬಹುದು. ಕೆಲವೇ ಮಂದಿಗೆ ಕೆಲಸ ಕೊಟ್ಟಿರುವವರು ಉದ್ದಿಮೆ ವಿಸ್ತರಿಸಿಕೊಂಡರೆ ಹಲವು ಮಂದಿಗೆ ಕೆಲಸ ಕೊಡಲು ಸಾಧ್ಯವಾಗುತ್ತದೆ’ ಎಂದರು.

‘ಕಿರು ಉದ್ದಿಮೆಗಳ ಮಹಿಳೆಯರು ತಮ್ಮ ಮುಂದಿನ ಉದ್ದೇಶ, ಯೋಜನೆ, ಆದಾಯ ಗಳಿಕೆಯ ಸಾಧ್ಯತೆಯ ಮಾಹಿತಗಳುಳ್ಳ ಪ್ರಸ್ತಾವನೆಯನ್ನು ಕೈಗಾರಿಕಾ ಕೇಂದ್ರಕ್ಕೆ ಸಲ್ಲಿಸಿದರೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಉದ್ದಿಮೆ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಖರೀದಿಸಿದರೆ ಸಹಾಯಧನವೂ ದೊರಕುತ್ತದೆ. ಮಹಿಳಾ ಉದ್ದಿಮೆಗಳಿಗೆ ವಿಶೇಷ ರಿಯಾಯಿತಿಗಳು ಇರುವುದರಿಂದ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಬಂಡವಾಳ ಹೂಡಿಕೆಗೆ ಸಹಾಯಧನ: ‘2014–19ರ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ದಿಮೆದಾರರಿಗೆ ಶೇ 25ರಿಂದ ಶೇ 40ರವರೆಗೆ ಬಂಡವಾಳ ಹೂಡಿಕೆ ಸಹಾಯಧನ ನೀಡಲಾಗುವುದು’ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಿ.ಮಂಜುನಾಥಗೌಡ ತಿಳಿಸಿದರು.

‘ಮುದ್ರಾಂಕ ಶುಲ್ಕ, ಪ್ರವೇಶ ತೆರಿಗೆ, ವಿದ್ಯುತ್‌ ತೆರಿಗೆ ವಿನಾಯಿತಿ ದೊರಕಲಿದೆ. ರಿಯಾಯಿತಿ ದರದಲ್ಲಿ ನೋಂದಣಿ, ಯೋಜನಾ ವರದಿ ತಯಾರಿಕೆ ಫೀ ಹಿಂಪಡೆಯುವಿಕೆ, ಹಣಕಾಸು ನಿಗಮದಿಂದ ಸಾಲ ₹50 ಲಕ್ಷದವರೆಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕುತ್ತದೆ’ ಎಂದರು.

ಇಲಾಖೆಯ ಉಪನಿರ್ದೇಶಕ ನಾಗೇಶ್‌ ಬಿಲ್ವ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ರಾಜಶೇಖರ್‌ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.