ಬಳ್ಳಾರಿ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯ ಕಾಮಗಾರಿಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯ್ಕ ಸೂಚಿಸಿದರು.
ಜಿ.ಪಂ. ಸಭಾ ಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ 152 ಗ್ರಾ.ಪಂ.ಗಳಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ.
ಉಳಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಾಮಗಾರಿ ಆರಂಭಿಸಬೇಕು. ಕೂಡ್ಲಿಗಿ ತಾಲ್ಲೂಕಿನ 4 ಗ್ರಾಮಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಕಾರ್ಯನಿರ್ವಾಹಕ ಅಧಿಕಾರಿಯವರು ಕೂಡಲೇ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಂಬಂಧಿಸಿದ ಗ್ರಾ.ಪಂ.ಗಳಿಗೆ ಕರೆದೊಯ್ದು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.
ಯೋಜನೆಯು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವರದಾನವಾಗಿದ್ದು, ಕೂಲಿ ಕಾರ್ಮಿಕರಿಗೆ ಊರಲ್ಲೇ ಉದ್ಯೋಗ ನೀಡಬಹುದಾಗಿದೆ. ಅನುದಾನ ಲಭ್ಯವಿದ್ದು, ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯ 96,716 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 15,673 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 72,355 ಟನ್ ರಸಗೊಬ್ಬರ ಸರಬರಾಜಾಗಿದೆ. ಆನ್‌ಲೈನ್ ಮೂಲಕ ಪಡಿತರ ಚೀಟಿ ವಿತರಣೆ ಯೋಜನೆ ಅಡಿ 9 ಸಾವಿರ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ವಿತರಿಸಲಾಗಿದೆ. 29 ಸಾವಿರ ಫಲಾನುಭವಿಗಳ ಭಾವಚಿತ್ರ ತೆಗೆಯುವ ಹಂತದಲ್ಲಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಫಲಾನುಭವಿಗಳ ಭಾವಚಿತ್ರ ತೆಗೆಯುವ ಕಾರ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಆ ಗ್ರಾ.ಪಂಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಇಲ್ಲದಿದ್ದಲ್ಲಿ ಸೌಲಭ್ಯ ಇರುವ ಗ್ರಾಮಗಳಿಗೆ ಫಲಾನುಭವಿಗಳನ್ನು ಕರೆದೊಯ್ದು ಭಾವಚಿತ್ರ ತೆಗೆಸಲು ನೆರವಾಗಬೇಕು ಎಂದು ಆದೇಶಿಸಿದರು
ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆ ಅಡಿ ಸಾಲ ಸೌಲಭ್ಯ ನೀಡಲು ಗುಂಪುಗಳನ್ನು ಶೀಘ್ರವೇ ರಚಿಸಬೇಕು. ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ವಸತಿ ಯೋಜನೆ ಅಡಿ ನಿವೇಶನ ಹಂಚಬೇಕು. ತಾಲ್ಲೂಕು ಮಟ್ಟದ ಕೆಡಿಪಿ ಸಭೆಗಳಿಗೆ ಕಡ್ಡಾಯವಾಗಿ ಅಧಿಕಾರಿಗಳು ಭಾಗವಹಿಸಬೇಕು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಅರಿಯಬೇಕು. ತಾಲೂಕು ಮಟ್ಟದ ಕೆಡಿಪಿ ಸಭೆಗಳಿಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷ ಚೆನ್ನಬಸವನಗೌಡ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜನ್ನು ಕ್ರಮಬದ್ಧವಾಗಿ ಮಾಡಬೇಕು. ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು
ಜಿಲ್ಲಾ ಪಂಚಾಯತಿ ವಿವಿಧ ಸ್ಥಾಯಿ ಸಮಿತಿಗಳ ಮುಖಂಡರು, ಚಂದ್ರಶೇಖರಗುಡಿ, ಉಪಕಾರ್ಯದರ್ಶಿ ಮಹೇಶ್ವರಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.