ADVERTISEMENT

ಊಟದ ಅವ್ಯವಸ್ಥೆ: ತರಬೇತಿಗೆ ಬಂದಿದ್ದ ಸಿಬ್ಬಂದಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 9:04 IST
Last Updated 8 ಮೇ 2018, 9:04 IST

ಸಂಡೂರು: ಊಟದ ಅವ್ಯವಸ್ಥೆ ಖಂಡಿಸಿ ಚುನಾವಣಾ ತರಬೇತಿಗೆ ಬಂದಿದ್ದ ಮತಗಟ್ಟೆ ಅಧಿಕಾರಿಗಳು ಸೋಮವಾರ ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ತರಬೇತಿ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು.

ತರಬೇತಿಗಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬೆಳಿಗ್ಗೆ 5ಗಂಟೆಗೆ ಬಸ್‌ ಹತ್ತಿ ಇಲ್ಲಿನ ತರಬೇತಿ ಕೇಂದ್ರಕ್ಕೆ ಬಂದಿದ್ದೇವೆ. ನಾವಿಲ್ಲಿಗೆ ಬಂದಾಗ ಉಪಾಹಾರ ಸಿದ್ಧತೆ ನಡೆದಿತ್ತು. ಆಹಾರ ಅರ್ಧ ಜನಕ್ಕೆ ಸಿಕ್ಕರೆ, ಅರ್ಧ ಜನಕ್ಕೆ ಸಿಗಲಿಲ್ಲ.

‘1,325 ಸಿಬ್ಬಂದಿ ತರಬೇತಿಗೆ ಬಂದಿದ್ದೇವೆ. ಇಷ್ಟು ಜನತೆಗೆ ಮಧ್ಯಾಹ್ನ ಒಂದೇ ಕೌಂಟರ್‌ ತೆರೆದಿದ್ದಾರೆ. ಕೆಲವರಿಗೆ ಊಟ ಸಿಕ್ಕರೆ, ಕೆಲವರಿಗೆ ದೊರೆತಿಲ್ಲ. ಇವತ್ತೇ ಹೀಗೆ, ಚುನಾವಣಾ ದಿನ ಹೇಗೋ’ ಎಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಪೊಲೀಸರು ಗಲಾಟೆ ನಿಯಂತ್ರಿಸುವ ಭರದಲ್ಲಿ ಶಿಕ್ಷಕರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಆಗ ಗಲಾಟೆ ಮತ್ತಷ್ಟು ಜೋರಾಯಿತು.

ತಹಶೀಲ್ದಾರ್ ಎಚ್.ಎಂ.ರಮೇಶ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ‘ಅವಶ್ಯ ಇರುವಷ್ಟು ಸಿಬ್ಬಂದಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಿದ್ದೇವೆ. ಅಡುಗೆ ತಯಾರಿ ತಡವಾಗಿದೆ. ಅವ್ಯವಸ್ಥೆ ಸರಿಪಡಿಸಲಾಗುವುದು’ ತಹಶೀಲ್ದಾರ್ ಎಚ್.ಎಂ.ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.