ADVERTISEMENT

ಒಣಗುತ್ತಿರುವ ಬೆಳೆ: ಮತ್ತೊಮ್ಮೆ ಬರದ ಛಾಯೆ...

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:49 IST
Last Updated 2 ಸೆಪ್ಟೆಂಬರ್ 2013, 5:49 IST
ಮಳೆ ಅಭಾವದಿಂದ ಹೂವಿನಹಡಗಲಿ ತಾಲ್ಲೂಕು ಸೋವೇನಹಳ್ಳಿ ಸುತ್ತಮುತ್ತ ಒಣಗಿರುವ ಶೇಂಗಾ ಬೆಳೆ
ಮಳೆ ಅಭಾವದಿಂದ ಹೂವಿನಹಡಗಲಿ ತಾಲ್ಲೂಕು ಸೋವೇನಹಳ್ಳಿ ಸುತ್ತಮುತ್ತ ಒಣಗಿರುವ ಶೇಂಗಾ ಬೆಳೆ   

ಹೂವಿನಹಡಗಲಿ:  ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯದೇ ಶುಷ್ಕ ವಾತಾವರಣ ಮುಂದುವರಿದಿರುವುದರಿಂದ ತೇವಾಂಶದ ಕೊರತೆಯಿಂದ ಬೆಳೆಗಳು ಬಾಡಲಾರಂಭಿಸಿವೆ.

ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಹೈಬ್ರಿಡ್ ಜೋಳ, ಸಜ್ಜೆ, ಶೇಂಗಾ, ತೊಗರಿ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಮಳೆ ಕೈ ಕೊಟ್ಟಿರುವುದರಿಂದ ರೈತಾಪಿ ವರ್ಗ ಚಿಂತೆಗೀಡಾಗಿದೆ. ಬೆಳೆ ಇಳುವರಿಗೆ ನಿರ್ಣಾಯಕವಾಗಿರುವ ಈ ದಿನಗಳಲ್ಲಿ ತೇವಾಂಶ ಕೊರತೆ ಕಂಡು ಬಂದಿರುವುದರಿಂದ `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂದು ರೈತರು ಗೊಣಗುತ್ತಿದ್ದಾರೆ.

ತಾಲ್ಲೂಕಿನ ಇಟ್ಟಿಗಿ ಮತ್ತು ಹಿರೇಹಡಗಲಿ ಹೋಬಳಿಯ ಎರೆ ಭೂಮಿಯಲ್ಲಿ ತೇವಾಂಶ ಇರುವುದರಿಂದ ಬೆಳೆಗಳು ಇನ್ನೂ ಕೆಲಕಾಲ ಜೀವ ಹಿಡಿದುಕೊಳ್ಳಬಹುದು. ಆದರೆ ಸೋವೇನಹಳ್ಳಿ, ಕಾಲ್ವಿ, ಹಕ್ಕಂಡಿ, ಹಿರೇಮಲ್ಲನಕೇರಿ, ಕೊಂಬಳಿ ಮುಂತಾದ ಗ್ರಾಮಗಳ ಕೆಂಪುಮಿಶ್ರಿತ ಮಸಾರಿ ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾಗಿ ಬೆಳೆಗಳು ಈಗಲೇ ಒಣಗಿ ನಿಂತಿವೆ.

ಆರಂಭಿಕ ಮುಂಗಾರು ಭರವಸೆ ಹುಟ್ಟಿಸಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿಯೇ ಹೂವಿನಹಡಗಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು (ಶೇ 94.74) ಬಿತ್ತನೆಯಾಗಿದೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿದಿತ್ತು. ಈ ನಡುವೆ ದೊಡ್ಡ ಮಳೆ ಸುರಿಯದಿದ್ದರೂ ಬೆಳೆಗಳು ಜೀವ ಹಿಡಿದುಕೊಳ್ಳಲು ಅಗತ್ಯವಾದ ತುಂತುರು ಮಳೆ ಆಗಾಗ ಸುರಿಯುತ್ತಿದ್ದುದರಿಂದ ತಾಲ್ಲೂಕಿನಲ್ಲಿ ಬೆಳೆಗಳು ಹಸಿರಿನಿಂದ ನಳನಳಿಸುತ್ತಿದ್ದವು. ಕಳೆದ ಒಂದು ವಾರದಿಂದ ಮಳೆ ಇಲ್ಲದೇ ಬಿಸಿಲಿನ ಪ್ರಖರತೆ ಹೆಚ್ಚಾಗಿ ಬೆಳೆಗಳು ಒಣಗಿ ಕಳೆಗುಂದಿವೆ.

ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 615.5 ಮಿ.ಮೀ. ಮಳೆ ಬೀಳಬೇಕಿದ್ದು, ಆಗಸ್ಟ್ ಅಂತ್ಯಕ್ಕೆ 351.15 ಮಿ.ಮೀ. ಮಳೆ ಬಿದ್ದಿದೆ.  ಮೇ ತಿಂಗಳಲ್ಲಿ 69 ಮಿ.ಮೀ. ಜೂನ್‌ನಲ್ಲಿ 104.35 ಮಿ.ಮೀ, ಜುಲೈನಲ್ಲಿ 63.43 ಮಿ.ಮೀ, ಆಗಸ್ಟ್‌ನಲ್ಲಿ 61.78 ಮಿ.ಮೀ. ಮಳೆ ಬಿದ್ದಿದೆ.


ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 63,476 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 32895 ಹೆಕ್ಟೇರ್ ಮೆಕ್ಕೆಜೋಳ, 8192 ಹೆಕ್ಟೇರ್ ಹೈ.ಜೋಳ, 3187 ಹೆಕ್ಟೇರ್ ಸಜ್ಜೆ,  4473 ಹೆಕ್ಟೇರ್ ತೊಗರಿ, 3709 ಹೆಕ್ಟೇರ್ ಸೂರ್ಯಕಾಂತಿ, 3066 ಹೆಕ್ಟೇರ್ ಶೇಂಗಾ, 1853 ಹೆಕ್ಟೇರ್ ಹತ್ತಿ ಸೇರಿದಂತೆ ಒಟ್ಟು 60140 ಹೆಕ್ಟೇರ್ ಪ್ರದೇಶದಲ್ಲಿ ಶೇ 94.74 ರಷ್ಟು ಬಿತ್ತನೆಯಾಗಿರುವುದಾಗಿ ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

`ಈ ವರ್ಷ ಮೈಲಾರಲಿಂಗ ಸ್ವಾಮಿ ಕಾರ್ಣೀಕ ಚಲೋ ಆಗೇತಿ, ಮಳಿಬೆಳಿ ಕೂಡ ಚಲೋ ಆಗಬಹ್ದು ಆನ್ನೋ ಆಶಾಭಾವನೆಯಲ್ಲಿದ್ವಿ. ಒಳ್ಳೆ ಟೈಂಕ ಮಳೆ ಕೈ ಕೊಟ್ಟಿದ್ದರಿಂದ ಸೋವೇನಹಳ್ಳಿ, ಕಾಲ್ವಿ ಮತ್ತು ಕೊಂಬಳಿ ಭಾಗದಲ್ಲಿ ಶೇ 70 ರಷ್ಟು ಬೆಳೆಗಳು ಒಣಗಿ ಹೋಗಿವೆ' ಎನ್ನುತ್ತಾರೆ ಸೋವೇನಹಳ್ಳಿ ರೈತ ಶಿವನಗೌಡ. ಸತತ ಬರಗಾಲ ಎದುರಿಸಿ ತತ್ತರಿಸಿರುವ ರೈತ ಸಮುದಾಯ ಸಧ್ಯ ಉತ್ತಮವಾದ ಮಳೆಯ ನಿರೀಕ್ಷೆಯಲ್ಲಿದ್ದು, ಹಸನಾದ ಮಳೆ ಸುರಿದರಷ್ಟೇ ರೈತನ ಮೊಗದಲ್ಲಿ ನಗೆ ಅರಳಬಹುದು ಎಂದು ಅವರು ತಿಳಿಸಿದರು.

ಸರ್ಕಾರದ ನಿರ್ಧಾರ: ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲಿ ವಾರದೊಳಗೆ ಮಳೆ ಸುರಿಯದಿದ್ದರೆ  ಇಳುವರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಬೆಳೆಗಳಲ್ಲಿ ಪರಾಗಸ್ಪರ್ಶ ಏರ್ಪಡುವ ಈ ದಿನಗಳಲ್ಲಿ ಕನಿಷ್ಟ ತೇವಾಂಶದ ಅವಶ್ಯಕತೆ ಇದೆ. ತಾಲ್ಲೂಕಿನ ಮಳೆ-ಬೆಳೆ ಸ್ಥಿತಿ ಕುರಿತು ಕಾಲಕಾಲಕ್ಕೆ ವರದಿ ಸಲ್ಲಿಕೆಯಾಗುತ್ತಿರುವುದರಿಂದ `ಬರಪೀಡಿತ ತಾಲ್ಲೂಕು' ಘೋಷಣೆ ಕುರಿತು ಸರ್ಕಾರ ನಿರ್ಧರಿಸಲಿದೆ ಎಂದು ಹೂವಿನಹಡಗಲಿ ಸಹಾಯಕ ಕೃಷಿ ನಿರ್ದೇಶಕ ಸಿದ್ದೇಶ್ವರ ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.