ADVERTISEMENT

ಓದುಗ ಸ್ನೇಹಿ ಇ–ಪುಸ್ತಕ ಲೋಕ

ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಶೀಘ್ರ ಸೇವೆ ಆರಂಭ

ಕೆ.ನರಸಿಂಹ ಮೂರ್ತಿ
Published 15 ಜೂನ್ 2015, 11:41 IST
Last Updated 15 ಜೂನ್ 2015, 11:41 IST

ಬಳ್ಳಾರಿ: ನಗರದ ಸಾಂಸ್ಕೃತಿಕ ಸಮು­ಚ್ಛಯ ಆವರಣದಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಓದುಗ ಸ್ನೇಹಿಯಾದ ಇ –ಪುಸ್ತಕ ಲೋಕವೊಂದು ಶೀಘ್ರ ಅನಾವರಣ ಗೊಳ್ಳಲಿದೆ. ಹೈದರಾ­ಬಾದ್‌ ಕರ್ನಾಟಕದ ಜಿಲ್ಲೆಗಳ ಪೈಕಿ ಇ–ಲೈಬ್ರರಿ ಸಾಫ್ಟ್‌ವೇರ್‌ ಅಳವಡಿಸಿಕೊಂಡ ಮೊದಲ ಸಾರ್ವಜನಿಕ ಗ್ರಂಥಾಲಯ­ವಾಗಿಯೂ ದಾಖಲೆ ನಿರ್ಮಿಸಲಿದೆ.

ಗ್ರಂಥಾಲಯದಲ್ಲಿರುವ ಪುಸ್ತಕಗಳ ಸಮಗ್ರ ಮಾಹಿತಿಯ ಕಂಪ್ಯೂಟರಿಗೆ ಅಳ­ವಡಿಸುವ ಕೆಲಸ ಭರದಿಂದ ನಡೆ­ಯು­ತ್ತಿದೆ. ಮುಂದಿನ ತಿಂಗಳ ಹೊತ್ತಿಗೆ ಹಳೇ ಗ್ರಂಥಾಲಯವು ಇ–ಗ್ರಂಥಾ­ಲಯವಾಗಿ ಬಾಗಿಲು ತೆರೆಯಲಿದೆ.

ಓದುಗರು ತಮಗೆ ಬೇಕಾದ ಪುಸ್ತಕವು ಗ್ರಂಥಾಲಯದಲ್ಲಿ ಇದೆಯೇ ಅಥವಾ ಬೇರೊಬ್ಬರು ಅದನ್ನು ಓದಲು ಪಡೆದಿರುವರೇ ಎಂಬ ಬಗ್ಗೆ ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಪುಸ್ತಕ­ಕ್ಕಾಗಿ ರ್‌್ಯಾಕ್‌ಗಳಲ್ಲಿ ಹುಡು­ಕಾಡುವ ಕೆಲಸಕ್ಕೆ ಕಡಿವಾಣ ಬೀಳಲಿದೆ. ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ. ಒಂದು ಗಂಟೆ ಅಥವಾ ಒಂದು ದಿನದ ಅವಧಿಯಲ್ಲಿ ಎಷ್ಟು ಪುಸ್ತಕಗಳನ್ನು ಎಷ್ಟು ಮಂದಿ ಪಡೆದರು ಎಂಬ ಮಾಹಿ­ತಿಯೂ ಸಿಬ್ಬಂದಿಯ ಬೆರಳ ತುದಿ­ಯಲ್ಲೇ ಲಭ್ಯವಿರಲಿದೆ.

ಬಾರ್‌ಕೋಡಿಂಗ್‌: ಇನ್ನು ಕೆಲವು ಸಾವಿರ ಪುಸ್ತಕಗಳಿಗೆ ಚೀಟಿ ಅಂಟಿಸಬೇಕಾಗಿದೆ ಎನ್ನು­ತ್ತಾರೆ ಮುಖ್ಯ ಗ್ರಂಥಾಲಯಾಧಿಕಾರಿ ರಾಮಯ್ಯ. ಪುಸ್ತಕದ ಹೆಸರು, ಪ್ರಕಾರ, ಲೇಖಕರು, ಪ್ರಕಾಶಕರು, ಪ್ರಕಟಣೆಯ ವರ್ಷ ಸೇರಿದಂತೆ ಸಮಗ್ರ ಮಾಹಿತಿಯ ದಾಖಲೀಕರಣದ ಕೆಲಸ ಪೂರ್ಣ­ಗೊಂಡರೆ, ಇಡೀ ಗ್ರಂಥಾ­ಲಯದ ನಿರ್ವಹಣೆ ಯನ್ನು ಓದುಗ ಸ್ನೇಹಿಯಾಗಿ ರೂಪಿ­ಸು­ವುದು ಬಹಳ ಸುಲಭ­ವಾಗು­ತ್ತದೆ ಎನ್ನುತ್ತಾರೆ ಅವರು.

ಸಾಫ್ಟ್‌ವೇರ್‌: ಗ್ರಂಥಾಲಯ ಪ್ರಾಧಿ­ಕಾರದ ನೇತೃತ್ವದಲ್ಲಿ ಸ್ಥಳೀಯ­ವಾ­ಗಿಯೇ ಹಣವನ್ನು ಕೂಡಿಸಿ ಇ–ಲೈಬ್ರರಿ ಸಾಫ್ಟ್‌ವೇರ್‌ ಅನ್ನು ಅಳವಡಿಸ­ಲಾಗು­ತ್ತಿದೆ. ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ಹಿಂದಿನ ಅವಧಿಯ ಮೇಯರ್‌ ರಮೇಶ್‌ ಸಹ­ಕಾರ ಸ್ಮರ­ಣೀಯ  ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರನ್ನು ಹೊರತುಪಡಿಸಿ­ದರೆ ಬಹುತೇಕ ಸಾರ್ವಜನಿಕ ಗ್ರಂಥಾ­ಲಯಗಳಲ್ಲಿ ಇ–ಲೈಬ್ರರಿ ಸಾಫ್ಟ್‌ ವೇರ್‌ ಅಳವಡಿಕೆ ಯಾಗಿಲ್ಲ. ಕೆಲವೆಡೆ ಅಳವಡಿಸುವ ಕೆಲಸ ಶುರುವಾಗಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿ, ಪೂರ್ಣ ಪ್ರಮಾಣದಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಗ್ರಂಥಾ­ಲಯವಾಗಿ ಈ ಗ್ರಂಥಾಲಯವು ಗಮನ ಸೆಳೆ­ಯ­ಲಿದೆ ಎಂದರು.

ಸ್ವಾಗತಾರ್ಹ: ಇ–ಸೌಲಭ್ಯ ಅಳವಡಿಸುತ್ತಿರುವುದು ಸ್ವಾಗತಾರ್ಹ ಕಾರ್ಯ. ಅದರಿಂದ ಓದುಗರಿಗೆ ಹೆಚ್ಚಿನ ಅನುಕೂಲವಾಗಬೇಕಷ್ಟೆ ಎಂದು ಪದವಿ ವಿದ್ಯಾರ್ಥಿಗಳಾದ ರಾಮಾಂಜಿ, ನರೇಶ್‌, ಸ್ವಾತಿ, ನಿರ್ಮಲಾ, ಗುರುದತ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.