ADVERTISEMENT

ಕನ್ನಡಿಗರಿಗೆ ಆದ್ಯತೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 10:05 IST
Last Updated 4 ಫೆಬ್ರುವರಿ 2011, 10:05 IST

ಬಳ್ಳಾರಿ: ಬೃಹತ್ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಮಹಿಷಿ ವರದಿ ಅನುಷ್ಠಾನಕ್ಕೆ ತಂದಿದ್ದು, ಕನ್ನಡಿಗರಿಗೆ ಇದರಿಂದ ನೆರವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಲ್ಲಿಕಾ ಘಂಟಿ ತಿಳಿಸಿದರು.

ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ‘ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ಕನ್ನಡವು ಇಂಗ್ಲಿಷ್ ಮತ್ತಿತರ ಭಾಷೆಗಳ ಸ್ಪರ್ಧೆ ಎದುರಿಸಿ ಉಳಿಯ ಬೇಕಾಗಿದೆ. ಬಳ್ಳಾರಿ ನಗರದಲ್ಲಿ ಬೇರೆಬೇರೆ ಭಾಷೆಗಳ ದಬ್ಬಾಳಿಕೆ ಯಿಂದಾಗಿ, ಕನ್ನಡಿಗರ ನಿರ್ಲಕ್ಷ್ಯದಿಂದ ಕನ್ನಡ ಮರೆಯಾಗುತ್ತಿದೆ. ಕನ್ನಡವೇ ಸಾರ್ವಭೌಮ ಭಾಷೆಯಾಗಿ ಹೊರ ಹೊಮ್ಮಬೇಕು ಎಂಬ ಕಾರಣಕ್ಕೆ ಪ್ರಾಧಿಕಾರವು ವಿವಿಧ ಕಾರ್ಯಕ್ರಮ ರೂಪಿಸಿದೆ ಎಂದರು.

ದೃಶ್ಯ ಮಾಧ್ಯಮಗಳು ಕನ್ನಡವನ್ನು ಇಡಿಯಾಗಿ ಬಳಸದೆ, ಮಿಶ್ರವಾಗಿ ಬಳಸಿ, ಕಲುಷಿತಗೊಳಿಸುತ್ತಿವೆ. ಮಾಧ್ಯಮಗಳು ಶುದ್ಧ ಕನ್ನಡ ಬಳಸುವಂತಾಗಬೇಕು. ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡ ಉಳಿಯಬೇಕು. ಸಾಂಸ್ಕೃತಿಕವಾಗಿ ಕನ್ನಡವನ್ನು ಉಳಿಸುವ ಜವಾಬ್ದಾರಿ ಯುವ ಪೀಳಿಗೆಯ ಕೈಲಿದೆ ಎಂದು ಅವರು ತಿಳಿಸಿದರು.

ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ  ಡಾ.ಮಾನ್ಕರಿ ಶ್ರೀನಿವಾಸಾಚಾರ್ಯ ಉಪನ್ಯಾಸ ನೀಡಿ, ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಳಕೆಯ ಕೌಶಲ್ಯಗಳು ಎಂಬ ವಿಷಯವಾಗಿ ಮಾತನಾಡುತ್ತಾ, ಸಂವಹನ ಭಾಷೆಯಲ್ಲಿ ಶುದ್ಧ ಕನ್ನಡವನ್ನು ಬಳಸುವ ರೀತಿ, ಅಲ್ಪ ಪ್ರಾಣ, ಮಹಾಪ್ರಾಣ, ಲ-ಕಾರ, ಳ-ಕಾರಗಳ ಬಳಕೆಯ ಕುರಿತು ಹಾಸ್ಯ ಮಿಶ್ರಿತವಾಗಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು. ಆತ್ಮೀಯತೆ ಯನ್ನು ಬೆಳೆಸುವ ಸತ್ವ ಕನ್ನಡದಲ್ಲಿದೆ. ಕನ್ನಡ ಭಾಷೆಯನ್ನು ಬಳಸಬೇಕು. ಹಳೆಯ ಜನಾಂಗದ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸ ಬೇಕು ಎಂದರು.

ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಕನ್ನಡಿಗರು ಅಭಿಮಾನ ರೂಢಿಸಿಕೊಳ್ಳ ಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯ ರಾಜೇಶ್ ಬಾವಗಿ ತಿಳಿಸಿದರು.
ಡಾ.ಕೆ.ಬಸಪ್ಪ, ಐಟಿಐ ತರಬೇತಿ ಅಧಿಕಾರಿಗಳು, ಸಿಬ್ಬಂದಿ ಭಾಗವಹಿ ಸಿದ್ದರು.ಸುನೀಲ್ ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿ ನಾಗಭೂಷಣ ಆರ್. ಮಠ ಸ್ವಾಗತಿಸಿದರು. ಎಚ್.ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.  ಶ್ರೀನಿವಾಸುಲು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.