ADVERTISEMENT

ಕನ್ನಡ ಭಾಷಾ ಪುಸ್ತಕ ಪೂರೈಸಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 4:35 IST
Last Updated 1 ಅಕ್ಟೋಬರ್ 2012, 4:35 IST

ಬಳ್ಳಾರಿ: ಕರ್ನಾಟಕದ ಗಡಿಗೆ ಹೊಂದಿ ಕೊಂಡಿರುವ ಆಂಧ್ರಪ್ರದೇಶದ ಕನ್ನಡ ಶಾಲೆಗಳ ಸಾವಿರಾರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪುಸ್ತಕ ಪೂರೈಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಂಧ್ರ ಪ್ರದೇಶದ  ಡಿ.ಹಿರೇಹಾಳದಲ್ಲಿನ ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿದೆ.

ನಗರದಲ್ಲಿ ಭಾನುವಾರ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಕುರಿತ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಕರ್ನೂಲು, ಅನಂತಪುರ ಮತ್ತು ಮೆಹಬೂಬ್‌ನಗರ ಜಿಲ್ಲೆಗಳಲ್ಲಿ 84 ಕನ್ನಡ ಮಾಧ್ಯಮ ಶಾಲೆಗಳಿದ್ದು, 20 ಸಾವಿರ ವಿದ್ಯಾರ್ಥಿ ಗಳು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಶಾಲೆಗಳು ಆರಂಭವಾಗಿ 5 ತಿಂಗಳು ಕಳೆದರೂ ಕನ್ನಡ ಭಾಷಾ ಪಠ್ಯಪುಸ್ತಕ ಪೂರೈಕೆಯಾಗಿಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಸಿದಲ್ಲಿ ಕನ್ನಡ ಮಾತೃಭಾಷೆಯ ಈ ಎಲ್ಲರಿಗೂ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಒಡಿಶಾ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಗಡಿಗಳಲ್ಲಿರುವ ಆಂಧ್ರದ ಗ್ರಾಮಗಳ ಆಯಾ ಭಾಷಾ ಮಾಧ್ಯಮದ ಶಾಲೆಗಳಿಗೆ ಆಯಾ ರಾಜ್ಯ ಸರ್ಕಾರಗಳೇ  ಪುಸ್ತಕ ಪೂರೈಸುತ್ತಿದ್ದು, ಆ ಮಾದರಿಯಲ್ಲೇ ಕನ್ನಡ ವಿದ್ಯಾರ್ಥಿ ಗಳಿಗೂ ಪುಸ್ತಕ ಪೂರೈಸಬೇಕು ಎಂದು ಕೋರಲಾಯಿತು.

ಅಧ್ಯಕ್ಷ ಎ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಕೆ.ದೇವರಾಜ್ ನಾಯ್ಕ ಮತ್ತಿತರರು ಸಚಿವರಿಗೆ ಈ ಕುರಿತ ಮನವಿ ಸಲ್ಲಿಸಿ, ಕೂಡಲೇ ಪಠ್ಯಪುಸ್ತಕ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಅವರು, ಕನ್ನಡ ಭಾಷಾ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಲಭ್ಯ ವಾದರೂ, ಪಾಲಕರು ಖರೀದಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.