ADVERTISEMENT

ಕನ್ನಡ ವಿ.ವಿ. ‘ನುಡಿಹಬ್ಬ’ ಇಂದು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 5:42 IST
Last Updated 10 ಮಾರ್ಚ್ 2018, 5:42 IST

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ 5.30ಕ್ಕೆ ನಡೆಯಲಿರುವ 26ನೇ ‘ನುಡಿಹಬ್ಬ’ಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕಾರ್ಯಕ್ರಮದ ನಿಮಿತ್ತ ಶುಕ್ರವಾರ ದಿನವಿಡೀ ಬಯಲು ರಂಗಮಂದಿರದಲ್ಲಿ ಚುರುಕಿನಿಂದ ಸಿದ್ಧತೆಗಳು ನಡೆದವು. ಮಂಟಪಕ್ಕೆ ಸುಣ್ಣ, ಬಣ್ಣ ಬಳಿದು ಚೆಂದ ಮಾಡಲಾಗಿದೆ. ರಂಗಮಂದಿರದ ಆಸುಪಾಸಿನ ಗಿಡ, ಮರಗಳಿಗೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಹಸಿರು ಹೊದಿಕೆ ಹಾಕಲಾಗಿದೆ. ಗಣ್ಯರು ಹಾಗೂ ಪದವಿ ಪ್ರಮಾಣ ಪತ್ರ ಪಡೆಯುವವರು ಕುಳಿತುಕೊಳ್ಳಲು ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇಳಿಸಂಜೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನುಡಿಹಬ್ಬಕ್ಕೆ ಚಾಲನೆ ನೀಡುವರು. ನಂತರ ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ ಅವರಿಗೆ ನಾಡೋಜ ಗೌರವ ಪ್ರದಾನ ಮಾಡುವರು.

ADVERTISEMENT

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಪಿಎಚ್‌.ಡಿ ಪದವಿ ಪ್ರದಾನ ಮಾಡುವರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮೀನಾ ಚಂದಾವರ್ಕರ್‌ ಘಟಿಕೋತ್ಸವ ಭಾಷಣ ಮಾಡುವರು. ಕುಲಪತಿ ಪ್ರೊ.ಮಲ್ಲಿಕಾ ಎಸ್‌.ಘಂಟಿ, ಕುಲಸಚಿವ ಡಿ. ಪಾಂಡುರಂಗಬಾಬು ಉಪಸ್ಥಿತರಿರುವರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.