ADVERTISEMENT

ಕಲಾವಿದರ ಉಮೇದಿಯಿಂದ ರಂಗಭೂಮಿ ಶ್ರೀಮಂತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:05 IST
Last Updated 10 ಅಕ್ಟೋಬರ್ 2011, 5:05 IST

ಬಳ್ಳಾರಿ: ಬಡತನ, ಹಸಿವು ಇದ್ದರೂ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಬೇಕು ಎಂಬ ಕಲಾವಿದರ ಉಮೇದಿಯು ರಂಗಭೂಮಿಯನ್ನು  ಶ್ರೀಮಂತಗೊಳಿಸಿದೆ ಎಂದು ರಂಗಭೂಮಿ ಹಿರಿಯ ಕಲಾವಿದೆ ಎಳ್ಳಾರ್ತಿ ಚಾಮುಂಡಿ ಅಭಿಪ್ರಾಯಪಟ್ಟರು.

ನಗರದ ಜೋಳದರಾಶಿ ಡಾ. ದೊಡ್ಡನಗೌಡ ರಂಗಮಂದಿರ ದಲ್ಲಿ `ರಂಗಜಂಗಮ~  ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಹಾಸ್ಯ ನಾಟಕೋತ್ಸವ ದಲ್ಲಿ `ರಂಗಜಂಗಮ~ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಅನೇಕ ಕಲಾವಿದರು ರಂಗಭೂಮಿಗೆ  ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅಂತಹವರ ಸಹಭಾಗಿತ್ವ ಮತ್ತು ಆಸಕ್ತಿಯಿಂದಾಗಿಯೇ ನಾಡಿನ ರಂಗಭೂಮಿ ಜನಪ್ರಿಯಗೊಂಡಿದ್ದು, ಕಲಾ ಪ್ರೇಮಿಗಳನ್ನು ನಿರಂತರವಾಗಿ ರಂಜಿಸಿದೆ ಎಂದು ಅವರು ಹೇಳಿದರು.

`ಬಡತನದ ಹಿನ್ನೆಲೆಯಲ್ಲಿಯೇ ಬೆಳೆದು ಬಂದ ನಾನು, ತಂದೆಯ ಮಾರ್ಗದರ್ಶನದಲ್ಲಿ ರಂಗಭೂಮಿ ಹಾಗೂ ಜನಪದ ಕಲೆಯನ್ನು ನೆಚ್ಚಿಕೊಂಡೆ.  ಬಡತನ, ಹಸಿವು ರಂಗಭೂಮಿಯ ಕಡೆಗಿನ ಒಲವಿಗೆ ಅಡ್ಡಿಯಾಗಲಿಲ್ಲ. ಇದೀಗ ನನ್ನ ಸೇವೆಯನ್ನು ಗುರುತಿಸಿ, `ರಂಗಜಂಗಮ~ ಗ್ರಾಮೀಣಾಭಿವೃದ್ದಿ ಸಂಸ್ಥೆ ಪುರಸ್ಕಾರ ನೀಡಿ ಗೌರವಿಸಿರುವುದು ಅತೀವ ಸಂತೋಷವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಮಾತನಾಡಿ,  ಎಲೆಮರೆ ಕಾಯಿಯಂತೆ ಇರುವ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ರಂಗಜಂಗಮ ಸಂಸ್ಥೆ ತಮ್ಮ ಪ್ರತಿ ಕಾರ್ಯಕ್ರಮದಲ್ಲೂ ರಂಗಭೂಮಿಯ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಅಭಿನಂದನಿಯ ಎಂದರು.

ಮನರಂಜನೆಯ ಮಾಧ್ಯಮವಾಗಿರುವ ರಂಗಭೂಮಿಯು ಸಮಾಜದ ಅಂಕು-ಡೊಂಕು ತಿದ್ದಲು ಶ್ರಮಿಸಿದೆ. ಟಿವಿ ಮಾದ್ಯಮದ ಪೈಪೋಟಿಯಿಂದ ನಲುಗಿರುವ ರಂಗಭೂಮಿಯ ಉತ್ತಮ ಪ್ರಯೋಗಗಳಿಗೆ ಪ್ರೇಕ್ಷಕರು ಪ್ರೋತ್ಸಾಹ  ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಟಿ.ಎಚ್.ಎಂ. ಬಸವರಾಜ ತಿಳಿಸಿದರು.

ಶಂಕರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಘುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್, ಶ್ರಿಧರಗಡ್ಡೆ ದೊಡ್ಡಬಸಪ್ಪ, ಡಾ. ಕುಪ್ಪಗಲ್ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ರಂಗಭೂಮಿಯ ಹಿರಿಯ ಕಲಾವಿದೆ ಪ್ರೇಮಾ ಬಾದಾಮಿ ಅವರಿಗೂ ರಂಗಜಂಗಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಲ್ಲನಗೌಡ ಶಂಕರಬಂಡೆ ಸ್ವಾಗತಿಸಿದರು. ಅಮೇತಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.
ನಂತರ, `ದನ ಕಾಯುವವರ ದೊಡ್ಡಾಟ~, `ನನ್ನ ಹೆಂಡ್ತೀನ ಹುಡುಕಿ ಕೊಡಿ ಪ್ಲೀಸ್~ ನಾಟಕಗಳ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.