ADVERTISEMENT

ಕಾಂಗ್ರೆಸ್‌ಗೆ ಬಲ ತಂದ ಪಕ್ಷಾಂತರ!

ಜಿಲ್ಲೆಯಲ್ಲಿ ಖಾತೆ ತೆರೆಯದ ಜೆಡಿಎಸ್‌, ಮೂರು ಸ್ಥಾನಕ್ಕೆ ತೃಪ್ತಿ ಪಟ್ಟ ಬಿಜೆಪಿ

ಕೆ.ನರಸಿಂಹ ಮೂರ್ತಿ
Published 16 ಮೇ 2018, 10:19 IST
Last Updated 16 ಮೇ 2018, 10:19 IST

ಬಳ್ಳಾರಿ: ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ ವಿಜಯನಗರ ಕ್ಷೇತ್ರದ ಆನಂದ್‌ಸಿಂಗ್‌ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ.ನಾಗೇಂದ್ರ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್‌ ಬಂದ ಹಗರಿಬೊಮ್ಮನಹಳ್ಳಿಯ ಎಲ್‌ಬಿಪಿ ಭೀಮಾನಾಯ್ಕ ಸೇರಿ ಜಿಲ್ಲೆಯಲ್ಲಿ ಪಕ್ಷ ಆರು ಸ್ಥಾನಗಳನ್ನು ಗಳಿಸಿದೆ.

ಇದು ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಸಮಾಧಾನ ತರುವ ಅಂಶ. ಏಕೆಂದರೆ 2004 ಮತ್ತು 2008ರಲ್ಲಿ ಕಾಂಗ್ರೆಸ್‌ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವನ್ನಷ್ಟೇ ಗಳಿಸಿತ್ತು. ಹಿಂದಿನ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗಳಿಸಿತ್ತು.

ಅನುಪಮಾ ಶೆಣೈ ವರ್ಗಾವಣೆ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ತಂದರೂ, ಹಡಗಲಿಯ ಪಿ.ಟಿ.ಪರಮೇಶ್ವರನಾಯ್ಕ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕೆಲವೆಡೆ ಕಾಣಿಸಿಕೊಂಡ ಆಡಳಿತ ವಿರೋಧಿ ಅಲೆಯ ನಡುವೆಯೂ ಸಂಡೂರಿನಲ್ಲಿ ಈ.ತುಕಾರಾಂ ಮೂರನೇ ಬಾರಿಗೆ ಗೆದ್ದಿದ್ದಾರೆ. ಗಣಿಗಾರಿಕೆ ಸಂತ್ರಸ್ತರ ಅಸಮಾಧಾನ ಅವರ ಗೆಲುವನ್ನು ತಡೆಯಲು ಆಗಿಲ್ಲ.

ADVERTISEMENT

ಕಂಪ್ಲಿಯಲ್ಲಿ ಹಿಂದಿನ ಬಾರಿ ಕಾಂಗ್ರೆಸ್‌ ಟಿಕೆಟ್‌ ದೊರಕದೆ, ಪಕ್ಷೇತರರಾಗಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಜಿ.ಎನ್‌.ಗಣೇಶ್‌ ಈ ಬಾರಿ ಅದೇ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿರುವುದು ವಿಶೇಷ. ಚುನಾವಣೆಗೆ ಮುನ್ನವೇ ಗೆದ್ದಂತೆ ಬೀಗುತ್ತಿದ್ದ ಬಿಜೆಪಿಯ ಟಿ.ಎಚ್‌.ಸುರೇಶ್‌ಬಾಬು ಅವರಿಗೆ ಮುಖಭಂಗವಾಗಿದೆ.

ಬಿಜೆಪಿಗೂ ಬಲ:

ಬಿಜೆಪಿಯು ಹಿಂದಿನ ಬಾರಿಗಿಂತಲೂ ಈ ಬಾರಿ ಒಂದು ಹೆಚ್ಚು ಸ್ಥಾನ ಗಳಿಸಿ ಮೂರರ ಬಲದಲ್ಲಿದೆ. ಜಿಲ್ಲೆಯಲ್ಲಿ ಜಿ.ಸೋಮಶೇಖರ ರೆಡ್ಡಿ ಮತ್ತು ಸೋಮಲಿಂಗಪ್ಪ ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಗೆಲುವು ತಂದಿದ್ದಾರೆ. ಮೊಳಕಾಲ್ಮುರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ದೊರಕದ ಕಾರಣಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಕೂಡ್ಲಿಗಿಯಿಂದ ಸ್ಪರ್ಧಿಸಿದ್ದ ಎನ್‌.ವೈ.ಗೋಪಾಲಕೃಷ್ಣ ಅಚ್ಚರಿ ಎಂಬಂತೆ ಗೆದ್ದಿದ್ದಾರೆ.

ಅಲ್ಲಿ ಎನ್‌.ಟಿ.ಬೊಮ್ಮಣ್ಣ ಗೆದ್ದು ಜೆಡಿಎಸ್‌ ಒಂದು ಸ್ಥಾನವನ್ನಾದರೂ ಗಳಿಸುವ ದೊಡ್ಡ ನಿರೀಕ್ಷೆ ಹುಸಿಯಾಗಿದೆ. ಹಿಂದಿನ ಬಾರಿ ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಭೀಮಾನಾಯ್ಕ ಕಾಂಗ್ರೆಸ್‌ ಸೇರಿದ್ದಾರೆ, ಜೆಡಿಎಸ್‌ನ ಸಂಪೂರ್ಣ ಬಲ ಕುಸಿದಿದೆ.

ಜಿಲ್ಲೆಯಲ್ಲಿ ಪಕ್ಷಗಳ ಬಲಾಬಲ
ಒಟ್ಟು ಕ್ಷೇತ್ರಗಳು 09
ಬಿಜೆಪಿ–03
ಕಾಂಗ್ರೆಸ್–06

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.