ADVERTISEMENT

ಕಾರ್ಖಾನೆಗೆ ಕಬ್ಬು ಸಾಗಿಸಲು ನೆರವಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:14 IST
Last Updated 15 ಡಿಸೆಂಬರ್ 2012, 6:14 IST

ಹೊಸಪೇಟೆ: `ಹೊಸಪೇಟೆ ಐಎಸ್‌ಆರ್ ಕಾರ್ಖಾನೆ ಇದೇ  15ರ ಮಧ್ಯಾಹ್ನದೊಳಗಾಗಿ ಆರಂಭವಾಗಬೇಕು ಅಥವಾ ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಜಿಲ್ಲಾಡಳಿತ ನೆರವಾಗಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. 

ಕಾರ್ಖಾನೆ ಆರಂಭಿಸಲು ವಿಳಂಬ ನೀತಿ, ಆರಂಭಿಸಿದ ನಂತರ ಮನಬಂದಂತೆ ವರ್ತಿಸುತ್ತಿರುವ ಐಎಸ್‌ಆರ್ ಕಾರ್ಖಾನೆ ಧೋರಣೆಗಳಿಂದ ಬೇಸರಗೊಂಡ ರೈತ ಸಮುದಾಯ ತಮಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಶುಕ್ರವಾರ ಕಾರ್ಖಾನೆ ಮುಂದೆ ಪ್ರತಿಭಟನೆ ಆರಂಭಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಸಚಿವರು ರೈತರೊಂದಿಗೆ ಮಾತನಾಡಿದರು.

ನಂತರ ಜಿಲ್ಲಾಧಿಕಾರಿಗಳು ಕಾರ್ಖಾನೆ ಅಧಿಕಾರಿಗಳೊಂದಿಗೆ ಮಾತನಾಡಿ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸೂಚಿಸುವಂತೆ ಇಲ್ಲವಾದರೆ ಆಗುವ ಅನಾಹುತಗಳ ಬಗ್ಗೆಯೂ ಎಚ್ಚರಿಕೆಯನ್ನು ನೀಡುವ ಮೂಲಕ ಅಂತಿಮ ಗಡುವು ನೀಡಿದರು.   
ನಮ್ಮ ಭಾಗದ ಒಂದು ಕಾರ್ಖಾನೆ ಮುಚ್ಚಿಹೋಗಬಾರದು ಎಂದು ಎಷ್ಟುಬಾರಿ ಪ್ರಯತ್ನಿಸಿದರು ತನ್ನ  ಹಟಮಾರಿ ಧೋರಣೆಗೆ ಅಂತ್ಯ ಹೇಳುವಂತೆ ರೈತರು ತಮ್ಮ ನೋವು ತೋಡಿಕೊಂಡರು.

ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲುಗಜ್ಜಪ್ಪ, ಎಪಿಎಂಸಿ ಅಧ್ಯಕ್ಷ ಗೋಸಲ ಭರಮಪ್ಪ, ಕಿಚಡಿ ಲಕ್ಷ್ಮಣ, ಬಿ.ಕೆ.ನಾಗರಾಜರಾವ್, ಅರಳಿ ಕೊಟ್ರಪ್ಪ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಹೀರುದ್ದೀನ್, ತಾಲ್ಲೂಕು ಘಟಕದ ಅಧ್ಯಕ್ಷ ಕಾರ್ತಿಕ್, ನಗರ ಘಟಕದ ಅಧ್ಯಕ್ಷ ಟಿ.ವೆಂಕಟೇಶ್, ರೈತ ಮುಖಂಡರಾದ ನೆನಗಡ್ಲಿ ವೆಂಕೋಬಣ್ಣ, ಬ್ಯಾಲಾಳು ಪಂಪಾಪತಿ, ಜಿ. ಪರುಶುರಾಮ, ಖಾಜಾಹುಸೇನ್ ನಿಯಾಜಿ, ಕಮಲಾಪುರ ರೈತ ಮುಖಂಡರಾದ ಎಂ. ನಾಗಯ್ಯ, ಜೋಗಯ್ಯ, ಸಮೀವುಲ್ಲಾ ಮತ್ತಿತರರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.