ADVERTISEMENT

ಕುರಿಹಟ್ಟಿಯಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 10:35 IST
Last Updated 14 ಜನವರಿ 2011, 10:35 IST

ಕೂಡ್ಲಿಗಿ: ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಸಮೀಪದ ಕುರಿಹಟ್ಟಿಯಲ್ಲಿ ಮಂಗಳವಾರ ಮಾರಿಕಾಂಬಾ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಜಾತ್ರೆಯು ಬೇಡ ಬುಡಕಟ್ಟು ಸಂಪ್ರದಾಯದಂತೆ ನಡೆಯುವುದು ಇಲ್ಲಿನ ವಿಶೇಷವಾಗಿದೆ.ಪ್ರತಿ ವರ್ಷದ ಸಂಪ್ರದಾಯದಂತೆ ಮಾರಿಕಾಂವಾ ದೇವಿಯ ಉತ್ಸವ ಮೂರ್ತಿಯನ್ನು ಜಾನಪದ ವಾದ್ಯ ಗಳೊಂದಿಗೆ ಕುರಿಹಟ್ಟಿ ಗ್ರಾಮದಿಂದ ಹೊರವಲಯದಲ್ಲಿರುವ ತುಮಲು ಪ್ರದೇಶಕ್ಕೆ ಕೊಂಡೊಯ್ದು ದೇವಿಯನ್ನು ಪ್ರತಿಷ್ಠಾಪಿಸಲಾಯಿತು.

ಮೊದಲ ದಿನವಾದ ಮಂಗಳವಾರ ತುಮಲಿನಲ್ಲಿ ಪ್ರತಿಷ್ಠಾಪಿಸಲಾದ ಮಾರಿಕಾಂಬಾ ದೇವಿಗೆ ಭಕ್ತರು ಹಣ್ಣು, ಕಾಯಿ ಅರ್ಪಿಸಿ ಹರಕೆ ತೀರಿಸಿದರು.ಜಾನುವಾರುಗಳಿಗೆ ಯಾವುದೇ ಕಾಯಿಲೆಗಳು ಬಾರದಿರಲಿ ಎನ್ನುವ ದೃಷ್ಟಿಯಿಂದ ಗುಡಿಯ ಸುತ್ತಲೂ ಜಾನುವಾರುಗಳನ್ನು ಪ್ರದಕ್ಷಿಣೆ ಹಾಕಿಸಲಾಯಿತು.ಉತ್ಸವ ಮೂರ್ತಿಯೊಂದಿಗೆ ಗಂಗಾ ಪೂಜೆಗೆ ತೆರಳುವ ಮೂಲಕ ವಿವಿಧ ಪೂಜಾ ಕಾರ್ಯಗಳು ನಡೆದವು.

ಸಂಜೆ 4 ಗಂಟೆಗೆ ಸರಿಯಾಗಿ ಅಗ್ನಿ ತುಳಿಯುವ ಮೂಲಕ ಜಾನಪದ ಸೊಗಡಿನ ಸಾಂಪ್ರದಾಯಿಕ ವಿಧಾನ ಗಳನ್ನು ಆಚರಿಸಲಾಯಿತು.ತುಮಲು ಪ್ರದೇಶದಿಂದ ಸಂಜೆ 7 ಗಂಟೆಗೆ ದೇವಿಯನ್ನು ಕುರಿಹಟ್ಟಿ ಗ್ರಾಮಕ್ಕೆ ಕೊಂಡೊಯ್ದು ಗ್ರಾಮದ ದೇವರ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು.

ಜಾತ್ರಾ ಮಹೋತ್ಸವದಲ್ಲಿ ಮೊದಲ ದಿನ ಚಿಕ್ಕಜೋಗಿಹಳ್ಳಿ ಸಮೀಪದ ಲಂಬಾಣಿ ತಾಂಡಾದ ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ತುಮಲು ಪ್ರದೇಶದಲ್ಲಿ ತಾಂಡಾದ ಕೆಲವು ಮಹಿಳೆಯರು ಜಾನಪದ ಶೈಲಿಯ ಲಂಬಾಣಿ ನೃತ್ಯ ಮಾಡುತ್ತಿದ್ದ ದೃಶ್ಯ ಜಾತ್ರೆಯಲ್ಲಿ ವಿಶೇಷವಾಗಿತ್ತು.
ಈ ಜಾತ್ರಾ ಮಹೋತ್ಸವವು ಮೂರು ದಿನಗಳ ಕಾಲ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.