ಬಳ್ಳಾರಿ: ಪಕ್ಷದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ವಿರುದ್ಧ ಸ್ಥಳೀಯ ಕಾಂಗ್ರೆಸ್ ನಗರ ಜಿಲ್ಲಾ ಘಟಕ ಅಧ್ಯಕ್ಷ ಜೆ.ಎಸ್.ಆಂಜಿನೇಯಲು ತಿರುಗಿ ಬಿದ್ದಿದ್ದು, ಕ್ರೀಯಾಶೀಲವಲ್ಲದ, ಪಕ್ಷದ ಅಭಿವೃದ್ಧಿಗೆ ಶ್ರಮಿಸದ ಹಾಗೂ ಪಕ್ಷ ವಿರೋಧಿ ಧೋರಣೆ ಹೊಂದಿರುವ ಕೊಂಡಯ್ಯರಿಗೆ ಷೋಕಾಸ್ ನೋಟೀಸ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಪಕ್ಷದಿಂದ ಸಾಕಷ್ಟು ಉನ್ನತ ಅಧಿಕಾರಿಗಳನ್ನು ಅನುಭವಿಸಿರುವ ಕೆ.ಸಿ.ಕೊಂಡಯ್ಯನವರು ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಬೆಳವಣಿಗೆಗೆ ಶ್ರಮಿಸುತ್ತಿಲ್ಲ ಪಕ್ಷ ಸಂಘಟಿಸುವ ಯಾವುದೇ ಸಭೆ, ಸಮಾರಂಭಗಳಿಗೆ ಹಾಜರಾಗದೆ ಕಾಂಗ್ರೆಸ್‌ನ ಶಿಸ್ತನ್ನು ಉಲ್ಲಂಘಿಸು ತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಗತಿಗೆ ಒತ್ತು ನೀಡುತ್ತಿಲ್ಲ. ಪಕ್ಷದ ಭವಿಷ್ಯದ ಬಗ್ಗೆಯೂ ಇವರಿಗೆ ಕಾಳಜಿ ಇಲ್ಲ.
ಹಿರಿಯ ಮುಖಂಡರಾಗಿದ್ದುಕೊಂಡು ಕಿರಿಯರಿಗೆ ಮಾರ್ಗದರ್ಶನ ಮಾಡುವ ಹಾಗೂ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಆಸಕ್ತಿ ಇವರಿಗಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರು ಕಾಣಿಸಿ ಕೊಳ್ಳುತ್ತಿದ್ದಾರೆ ಎಂಬ ತಪ್ಪು ಸಂದೇಶ ಸಾರ್ವ ಜನಿಕರಿಗೆ ರವಾನೆಯಾಗಿದೆ ಎಂದರು.
ರಾಹುಲ್‌ಗಾಂಧಿಯವರ ಆಶಯದಂತೆ ಪಕ್ಷವನ್ನು ತಳಹದಿಯಿಂದ ಕಟ್ಟಬೇಕು. ಆದರೆ, ಕೊಂಡಯ್ಯನವರು ಪಕ್ಷವನ್ನು ತಮ್ಮ ಹಿತಾಸಕ್ತಿ ಹಾಗೂ ವೈಯಕ್ತಿಕ ಬೆಳವಣಿಗೆಗೆ ಬಳಸಿ ಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ನ ಸಂಘಟಿಸುವ ನಿಟ್ಟಿನಲ್ಲಿ ನಿಷ್ಕ್ರಿಯತೆ ಹಾಗೂ ನಿಷ್ಕಾಳಜಿ ವಹಿಸುತ್ತಿರುವ ಕೊಂಡಯ್ಯನವರಿಗೆ, ಷೋಕಾಸ್ ನೋಟೀಸ್ ಜಾರಿಮಾಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಒತ್ತಾಯಿಸುತ್ತಿದ್ದೆೀವೆ ಎಂದು ಆ.16ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ರಿಗೆ ಆಂಜಿನೇಯಲು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಆಂಜಿನೇಯಲು, ಕೊಂಡಯ್ಯನವರು ನಮ್ಮ ಹಿರಿಯ ನಾಯಕರು, ಪಕ್ಷದ ಬೆಳವಣಿಗೆ ದೃಷ್ಟಿಯಿಂದ ನಾವು ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದೆೀವೆ. ಇದು ಪಕ್ಷದ ಆಂತರಿಕದಲ್ಲಿ ನಡೆಯುವ ಪ್ರಕ್ರಿಯೆ. ನಾನು ನೀಡಿದ ದೂರಿನ ಪ್ರತಿ ಮಾಧ್ಯಮಗಳ ಕೈಗೆ ಹೇಗೆ ಸಿಕ್ಕಿದೆ ಎಂದು ಗೊತ್ತಿಲ್ಲ ಎಂದು ಹೇಳಿದರು.
ಆಂಜಿನೇಯಲು ನೀಡಿದ ದೂರಿಗೆ ಪ್ರತಿಕ್ರಿಯಿಸಿರುವ ಪಕ್ಷದ ಮುಖಂಡ ಬೆಣಕಲ್ ಬಸವರಾಜಗೌಡ, ಪಿ.ಗಾದೆಪ್ಪ ಮತ್ತಿತರರು, ಪಕ್ಷದಲ್ಲಿ ಏನೇ ಸಮಸ್ಯೆ ಇದ್ದರೂ ಒಳಗಿದ್ದೆೀ ಬಗೆಹರಿಸಿಕೊಳ್ಳಬೇಕು. ಬಹಿರಂಗವಾಗಿ ಮಾಧ್ಯಮ ಗಳ ಬಳಿ ಹೋಗಿರುವ ಆಂಜಿನೇಯಲು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷವನ್ನು ಒತ್ತಾಯಿಸುತ್ತಿದ್ದೆೀವೆ ಎಂದು ಹೇಳಿದ್ದಾರೆ.
ಆಂಜನೇಯ ಹೇಳಿಕೆಗೆ ಖಂಡನೆ
ಕೊಟ್ಟೂರು: ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಲೋಕಸಭಾ ಸದಸ್ಯ ಕೆ.ಸಿ. ಕೊಂಡಯ್ಯ ಅವರಿಗೆ ಜಿಲ್ಲಾ ಸಿಟಿ ಕಾಂಗ್ರೆಸ್ ಅಧ್ಯಕ್ಷ ಆಂಜನೇಯ ಶೋಕಾಸ್ ನೋಟೀಸ್ ನೀಡಬೇಕು ಎಂದು ಹೇಳಿರುವುದನ್ನು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರಯ್ಯ ಖಂಡಿಸಿದ್ದಾರೆ.
ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಅವರು ಈ ರೀತಿ ಹೇಳಲು ಆಂಜನೇಯ ಕಾಂಗ್ರೆಸ್‌ನ ಹೈಕಮಾಂಡ್ ಏನು ಎಂದು ಪ್ರಶ್ನಿಸಿದ್ದಾರೆ.
ಕೊಂಡಯ್ಯ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದಾರೆ. ಅಂತಹವರ ವಿರುದ್ದ ಆಂಜನೇಯ ಪೂರ್ವಗ್ರಹ ಪೀಡಿತರಾಗಿ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆಗಳಿದ್ದರೆ, ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ರಾಜ್ಯ ಸಭಾ ಸದಸ್ಯ ಅನಿಲ್ ಲಾಡ್, ಮಾಜಿ ಸಚಿವರಾದ ಭಾಗೀರಥಿ ಮರುಳಸಿದ್ದನ ಗೌಡ, ಎನ್.ಎಂ. ನಬಿ, ದಿವಾಕರ ಬಾಬು, ಶಾಸಕರಾದ ತುಕಾರಾಮ್, ಮಾಜಿ ಶಾಸಕರಾದ ಎನ್.ಟಿ. ಬೊಮ್ಮಣ್ಣ, ಗವಿಯಪ್ಪ, ಶಂಕರ ರೆಡ್ಡಿ ಅವರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಿ ಅದು ಬಿಟ್ಟು ಕೊಂಡಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಬೇಕು ಎಂದು ಹೇಳಿಕೆ ನೀಡುವುದು ಎಷ್ಟು ಸರಿ ಎಂದಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಕೊಂಡಯ್ಯ ವಿರುದ್ಧ ಈ ರೀತಿ ಹೇಳಿಕೆ ನೀಡುವುದ ಮೂಲಕ ಪಕ್ಷದ ಸಂಘಟನೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.