ADVERTISEMENT

ಕೋತಿಗಳ ಹಾವಳಿಗೆ ಗ್ರಾಮಸ್ಥರು ಕಂಗಾಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:31 IST
Last Updated 18 ಜುಲೈ 2017, 7:31 IST
ಕುರುಗೋಡು ಸಮೀಪದ ಬೈಲೂರು ಗ್ರಾಮದಲ್ಲಿ ಬೀಡುಬಿಟ್ಟಿರುವ ಕೋತಿಗಳನ್ನು ಓಡಿಸಲು ಮುಂದಾದ ಗ್ರಾಮಸ್ಥರು
ಕುರುಗೋಡು ಸಮೀಪದ ಬೈಲೂರು ಗ್ರಾಮದಲ್ಲಿ ಬೀಡುಬಿಟ್ಟಿರುವ ಕೋತಿಗಳನ್ನು ಓಡಿಸಲು ಮುಂದಾದ ಗ್ರಾಮಸ್ಥರು   

ಕುರುಗೋಡು: ಇಲ್ಲಿಗೆ ಸಮೀಪದ ಬೈಲೂರು ಗ್ರಾಮದ ಜನರು ಕೋತಿಗಳ ಹಾವಳಿಯಿಂದ ಕಂಗಾಲಾಗಿದ್ದಾರೆ. ಜನವಸತಿ ಇಲ್ಲದ ಪ್ರದೇಶ ಮತ್ತು ಗ್ರಾಮದ ಹೊಲ ಗದ್ದೆಗಳಿಗೆ ಒಂಟಿಯಾಗಿ ಹೋಗುವವರ ಮೇಲೆ ದಾಳಿ ನಡೆಸಿ ಗಾಯ ಗೊಳಿಸುತ್ತಿವೆ. ಇದರಿಂದ ಜನರು ಒಬ್ಬಂಟಿಯಾಗಿ ಹೊರಗಡೆ ಹೋಗು ವುದಕ್ಕೆ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.

ಕೋತಿಗಳ ಕಾಟದಿಂದ ರಕ್ಷಿಸಿಕೊಳ್ಳಲು ಶಾಲೆಗೆ ಹೋಗುವ ಮಕ್ಕಳು ಪುಸ್ತಕದ ಬ್ಯಾಗ್ ಜತೆಗೆ ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗ ಬೇಕಾದ ಅನಿವಾರ್ಯತೆ ತಲೆದೋರಿದೆ. ಮಹಿಳೆಯರು ಒಬ್ಬಂಟಿಯಾಗಿ ಗ್ರಾಮದ ಹೊರ ವಲಯದಲ್ಲಿರುವ ಸಾಮೂಹಿಕ ಶೌಚಾಲಯಕ್ಕೆ ಹೋಗಲೂ ಭಯಪಡಬೇಕಾಗಿದೆ.

ಈವರೆಗೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ಕೋತಿಗಳ ಕಡಿತದಿಂದ ಗಾಯಗೊಂಡಿದ್ದಾರೆ. ಕೋಲು ಹಿಡಿದು ಹೋಡಿಸಿದರೆ ಸ್ವಲ್ಪ ದೂರ ಹೋಗಿ ಪುನಾ ಗ್ರಾಮಕ್ಕೆ ಬಂದು ತಮ್ಮ ಕುಚೇಷ್ಟೆ ಮುಂದುವರೆಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಕೋತಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಜಗದೀಶ ರೆಡ್ಡಿ ಆರೋಪಿಸಿದರು. ಭಯಭೀತರಾದ ಜನರು ಅರಣ್ಯ ಇಲಾಖೆ ಸಿಬ್ಬಂದಿ ಬರುವಿಕೆಗಾಗಿ ಕಾಯದೆ ತಾವೇ ಗುಂಪಾಗಿ ಹೊರವಲಯದ ಗುಡ್ಡದಲ್ಲಿ ಬೀಡುಬಿಟ್ಟಿರುವ ಕೋತಿಗಳನ್ನು ಓಡಿಸಲು ಮುಂದಾದರು.

ಅರಣ್ಯ ಇಲಾಖೆ ಸಿಬ್ಬಂದಿ ಕೋತಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಬೋನುಗಳನ್ನು ತರದೇ ಬರಿಗೈಯಲ್ಲಿ ಬಂದಿದ್ದರಿಂದ ಜನರ ಆಕ್ರೋಶ ಎದುರಿಸಬೇಕಾಯಿತು. ಗ್ರಾಮದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ದೊರೆಕಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

* * 

ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜನರ ನೆಮ್ಮದಿ ಕೆಡಿಸಿರುವ ಕೋತಿಗಳನ್ನು ಸ್ಥಳಾಂತರಿಸಲು ಕಾರ್ಯಪ್ರವೃತ್ತರಾಗುವ ಅಗತ್ಯವಿದೆ
ಸೋಮಸಮುದ್ರ ಹನುಮಂತಪ್ಪ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.