ADVERTISEMENT

ಕ್ರಿಸ್ಮಸ್: ‘ನವಜೀವನ’ದೊಂದಿಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 10:13 IST
Last Updated 24 ಡಿಸೆಂಬರ್ 2013, 10:13 IST

ಬಳ್ಳಾರಿ: ಕ್ರಿಸ್ಮಸ್‌ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಕ್ರೈಸ್ತ ಕುಟುಂಬದಲ್ಲೂ ಸಡಗರ ಮೇರೆಮೀರಿದೆ. ಉಡುಗೊರೆಗಳ ವಿನಿಮಯ, ಸಿಹಿ ತಿನಿಸುಗಳ ತಯಾರಿ, ಹೊಸ ಬಟ್ಟೆಗಳ ಖರೀದಿ ಭರಾಟೆ ಕೆಲವು ದಿನಗಳಿಂದ ನಡೆದಿದೆ.

ನಗರದಲ್ಲಿರುವ ಕ್ರೈಸ್ತರು ಏಸು ಕ್ರಿಸ್ತನ ಜನ್ಮದಿನದ ಶುಭ ಘಳಿಗೆಯನ್ನು ಬರಮಾಡಿಕೊಳ್ಳಲು ಪೂರ್ವಸಿದ್ಧತೆ ನಡೆಸಿದ್ದು, ಕಳೆದ 3 ದಿನಗಳಿಂದ ಕ್ರಿಸ್ತನ ಮಹತ್ವ ಸಾರುವ, ಹಾಡಿಹೊಗಳುವ ‘ಗೀತಗಾಯನ’ (ಕ್ಯಾರಲ್)ದ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಕ್ರೈಸ್ತ ಗುರುಗಳು ಮನೆಮನೆಗೆ ತೆರಳಿ, ಕ್ರಿಸ್ಮಸ್‌ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಸಾಂತಾ ಕ್ಲಾಸ್‌ ವೇಷಧಾರಿ ಪ್ರತಿಯೊಬ್ಬರನ್ನೂ ಆಶೀರ್ವದಿಸುತ್ತ, ಶುಭ ಕೋರುತ್ತಿದ್ದಾರೆ.

ಮನೆಮನೆಗಳ ಅಂಗಳದಲ್ಲಿ ರಾರಾಜಿಸುತ್ತಿರುವ ನಕ್ಷತ್ರದಾಕಾರದ ಆಕಾಶ ಬುಟ್ಟಿಗಳಲ್ಲಿ ಕ್ರಿಸ್ಮಸ್‌ ದೀಪ ಮಿನುಗುತ್ತಿದ್ದು, ಯೇಸು ಜನಿಸಿದ ಗೋದಲಿ (ಕ್ರಿಬ್‌)ಗಳೂ ಭಕ್ತಿಭಾವವನ್ನು ಉದ್ದೀಪನಗೊಳಿಸುತ್ತಿವೆ.

ಮಕ್ಕಳ ಸಂಭ್ರಮ: ನಗರದ ಕೊಳಗಲ್‌ ರಸ್ತೆಯಲ್ಲಿನ ಕಂಟೋನ್‌ಮೆಂಟ್‌ ಪ್ರದೇಶದಲ್ಲಿನ ಸೆಂಟ್‌ ಜೋಸೆಫ್‌ ಕ್ಲೂನಿ ಸಿಸ್ಟರ್ಸ್‌ ಸಂಸ್ಥೆಯ ನವಜೀವನ ಪುನರ್ವಸತಿ ಕೇಂದ್ರದಲ್ಲಿನ ನೂರಾರು ಮಕ್ಕಳ ಕ್ರಿಸ್ಮಸ್‌ ಸಡಗರವೂ ಆರಂಭವಾಗಿದ್ದು, ವಾರ್ಷಿಕೋತ್ಸವದ ಮಾದರಿಯಲ್ಲಿ ನಡೆದಿರುವ ಗೀತಗಾಯನ, ಪ್ರತಿಭಾ ಪ್ರದರ್ಶನ, ಕ್ರೀಡೆ, ನೃತ್ಯ, ಹಾಡು, ಕುಣಿತಕ್ಕೆ ಚಾಲನೆ ದೊರೆತಿದೆ.

ಬಾಲಕಾರ್ಮಿಕರು, ಅಂಗವಿಕಲರೇ ಇರುವ ಈ ಪುನರ್ವಸತಿ ಕೇಂದ್ರದ ಮಕ್ಕಳ ಪಾಲಕರೂ ಭಾನುವಾರ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಬೆಳವಣಿಗೆಯನ್ನೂ, ಬದಲಾವಣೆಯನ್ನೂ ಗಮನಿಸಿದ್ದಾರೆ.


ಕ್ರಿಸ್ಮಸ್‌ ಹಿನ್ನೆಲೆಯಲ್ಲೇ ಒಂದು ತಿಂಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಣಿಯಾಗುತ್ತ, ಅಭ್ಯಾಸ ನಡೆಸಲಾಗಿದೆ. ಪ್ರತಿ ಮಗುವೂ ಕ್ರಿಸ್ಮಸ್‌ ಸಡಗರದಲ್ಲಿ ಪಾಲ್ಗೊಳ್ಳಲಿ ಎಂಬ ಇರಾದೆಯೊಂದಿಗೆ ವಿಭಿನ್ನ ಕಾರ್ಯಕ್ರಮ ನೀಡಿ, ತರಬೇತಿ ನೀಡಲಾಗಿದೆ. ಮಕ್ಕಳೆಲ್ಲ ಕಲಾ ಪ್ರತಿಭೆ ಪ್ರದರ್ಶಿಸಿ ಇತರರ ಚಪ್ಪಾಳೆ ಗಿಟ್ಟಿಸಿದ್ದಾರೆ ಎಂದು ಕೇಂದ್ರದ ಸಿಸ್ಟರ್‌ ಲೂಸಿಯಾನಾ ಕೇಂದ್ರಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಎದುರು ಸಂತಸ ಹಂಚಿಕೊಂಡರು.

ಮಕ್ಕಳಿಗೆ ಹೊಸ ಬಟ್ಟೆ ವಿತರಿಸಲಾಗಿದೆ. ಉಡುಗೊರೆ ನೀಡುವವರ ದಂಡು ಕೇಂದ್ರಕ್ಕೆ ಆಗಮಿಸಿ, ಬಟ್ಟೆ, ಸಿಹಿತಿಂಡಿ, ಕೇಕ್‌, ಆಟೋಪಕರಣ,  ಪಾಠೋಪಕರಣಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಕ್ರಿಸ್ಮಸ್‌ ದಿನವೂ ಅನೇಕ ಕುಟುಂಬಗಳ ಸದಸ್ಯರು ಇಲ್ಲಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂಭ್ರಮವನ್ನು ಆಚರಿಸಿ, ಉಡುಗೊರೆ ನೀಡಿ ತೆರಳುತ್ತಾರೆ ಎಂದು ಅವರು ತಿಳಿಸಿದರು.

ಭಾನುವಾರ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದಿದ್ದು, ಸೋಮವಾರ ಯೇಸುವನ್ನು ಕೊಂಡಾಡುವ ಕ್ಯಾರಲ್‌ ಪ್ರಸ್ತುತಪಡಿಸುವ ಮಕ್ಕಳು, ಮಂಗಳವಾರ ಆಟ, ಹಾಡು, ನೃತ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ನಡೆಯಲಿರುವ ಕ್ರಿಸ್ಮಸ್‌ ಹಬ್ಬದ ಅಂಗವಾಗಿ ಹೊಸ ಬಟ್ಟೆ ತೊಟ್ಟು ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಲಿರುವ ಮಕ್ಕಳು, ಕೇಂದ್ರಕ್ಕೆ ಮರಳಿ, ಸಿಹಿ ಊಟ ಸವಿಯಲಿದ್ದಾರೆ. ಕೇಕ್‌ ಆಸ್ವಾದಿಸಲಿದ್ದಾರೆ ಎಂದು ಅವರು ವಿವರ ನೀಡಿದರು.

ಈಗಾಗಲೇ ಕೇಂದ್ರದ ಆವರಣದಲ್ಲಿ ‘ಕ್ರಿಸ್ಮಸ್‌ ಟ್ರೀ’ ಕಂಗೊಳಿಸುತ್ತಿದೆ. ಕ್ರಿಬ್‌ ಸಿದ್ಧಗೊಂಡಿದೆ. ಬಾಲ ಯೇಸು ಕ್ರಿಬ್‌ನಲ್ಲಿ ಆಸೀನನಾಗಿ ಮಕ್ಕಳಿಗೆ ಶುಭ ಕೋರುತ್ತ, ಆಶೀರ್ವದಿಸುತ್ತಿದ್ದು, ಮಂಗಳವಾರವೂ ಅಲಂಕಾರ ಕಾರ್ಯ ಮುಂದುವರಿಯಲಿದೆ. ಅತ್ಯಾಕರ್ಷಕ ವಿದ್ಯುತ್‌ ದೀಪಗಳನ್ನು ಅಳವಡಿಸುವ ಮೂಲಕ ಇಡೀ ಆವರಣ ಝಗಮಗಿಸುವಂತೆ ಮಾಡಲಾಗುವುದು. ಕ್ರಿಸ್ತನ ಹುಟ್ಟುಹಬ್ಬದ ಮುನ್ನಾ ದಿನದಂದು ನೂರಾರು ಮೇಣದ ಬತ್ತಿಗಳನ್ನು ಬೆಳಗಿಸಿ, ‘ಎಲ್ಲರಿಗೂ ಶುಭವಾಗಲಿ’ ಎಂದು ಕೋರುವ ವಿಶೇಷ ಕಾರ್ಯಕ್ರಮವೂ ನಡೆಯಲಿದೆ. ಸರ್ವಧರ್ಮೀಯ ಮಕ್ಕಳು ಇರುವ ಈ ಕೇಂದ್ರದಲ್ಲಿ ಪ್ರತಿ ವರ್ಷವೂ ಕ್ರಿಸ್ಮಸ್‌ ಆಚರಣೆ ವಿಭಿನ್ನವಾಗಿಯೇ ನಡೆಯುತ್ತದೆ ಎಂದು ಸಿಸ್ಟರ್‌ ಜಸ್ಟೀನಾ ಹೇಳಿದರು.

ಮಕ್ಕಳ ಮನೋ ವಿಕಾಸಕ್ಕೆ ಶ್ರಮಿಸುತ್ತಿರುವ ಸಿಸ್ಟರ್‌ ಥಿಯೋಡರ್‌, ಮಾರಿ ಜೋಸೆಫ್‌, ಸಿಮಿ, ಸ್ಟೆಲ್ಲಾ, ಏಂಜೆಲ್‌, ಲಿಯೋ ಹಾಗೂ ಇತರ 14 ಜನ ಸಿಬ್ಬಂದಿ ಎಲ್ಲ ಮಕ್ಕಳೊಂದಿಗೆ ಹಾಡಿ, ನಲಿಯುತ್ತಿದ್ದು, ಡಿ. 25ರ ಸಂತಸದ ಕ್ಷಣಗಳಿಗಾಗಿ ಕಾತರರಾಗಿದ್ದಾರೆ. ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುವ ಖುಷಿಯೇ ವಿಭಿನ್ನ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.