ADVERTISEMENT

‘ಗಣಿಗಾರಿಕೆ ಅನುಮತಿ ರದ್ದುಪಡಿಸಿ’

ಮುಖ್ಯಮಂತ್ರಿ ಕೊಟ್ಟ ಮಾತು ಉಳಿಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 10:58 IST
Last Updated 19 ಜೂನ್ 2018, 10:58 IST
ಕುಮಾರಸ್ವಾಮಿ ಬೆಟ್ಟವನ್ನು ರಾಷ್ಟ್ರೀಯ ಪಾರಂಪರಿಕ ತಾಣವೆಂದು ಘೋಷಿಸುವಂತೆ ಜನ ಸಂಗ್ರಾಮ ಪರಿಷತ್ ಮುಖಂಡರು ಸೋಮವಾರ ತಹಶೀಲ್ದಾರ್ ಎಚ್.ಎಂ. ರಮೇಶ್ ಅವರಿಗೆ ಮನವಿ ಕೊಟ್ಟರು
ಕುಮಾರಸ್ವಾಮಿ ಬೆಟ್ಟವನ್ನು ರಾಷ್ಟ್ರೀಯ ಪಾರಂಪರಿಕ ತಾಣವೆಂದು ಘೋಷಿಸುವಂತೆ ಜನ ಸಂಗ್ರಾಮ ಪರಿಷತ್ ಮುಖಂಡರು ಸೋಮವಾರ ತಹಶೀಲ್ದಾರ್ ಎಚ್.ಎಂ. ರಮೇಶ್ ಅವರಿಗೆ ಮನವಿ ಕೊಟ್ಟರು   

ಸಂಡೂರು: ತಾಲ್ಲೂಕಿನ ಕುಮಾರಸ್ವಾಮಿ ದೇವಸ್ಥಾನದ ‌ಹತ್ತಿರವಿರುವ ಎಚ್.ಟಿ.ಗಣಿ ಪ್ರದೇಶದಲ್ಲಿ ಜಿಂದಾಲ್ ಒಡೆತನದ ‘ನಂದಿ ಮೈನಿಂಗ್ ಕಂಪನಿ‘ಗೆ ಅದಿರು ಉತ್ಪಾದನೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೇ 31ರಂದು ಆದೇಶ ನೀಡಿದೆ. ಇದನ್ನು ರದ್ದು ಮಾಡಿ ದೇವಸ್ಥಾನವಿರುವ ಬೆಟ್ಟವನ್ನು ರಾಷ್ಟ್ರೀಯ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಜನ ಸಂಗ್ರಾಮ ಪರಿಷತ್ ಮುಖಂಡರು ಸೋಮವಾರ ಒತ್ತಾಯಿಸಿದ್ದಾರೆ. ಪರಿಷತ್ ಮುಖಂಡರು ಈ ಕುರಿತ ಮನವಸಿಯನ್ನು ತಹಶೀಲ್ದಾರ್ ಎಚ್.ಎಂ. ರಮೇಶ್ ಅವರ ಮೂಲಕ ಮುಖ್ಯಮಂತ್ರಿಗೆ ರವಾನಿಸಿದರು.

ಸಿ.ಎಂಗೆ ಮನವಿ: ಎಚ್.ಡಿ. ಕುಮಾರಸ್ವಾಮಿ ಅವರು ಇಲ್ಲಿನ ದೇವಸ್ಥಾನಕ್ಕೆ ಫೆ. 26ರಂದು ಭೇಟಿ ನೀಡಿದಾಗ ಪರಿಷತ್ ವತಿಯಿಂದ ದೇವಸ್ಥಾನ ‌ಮತ್ತು ಅದರ ಸುತ್ತಲಿನ ಪರಿಸರ ಕುರಿತು 200 ಕ್ಕೂ ಹೆಚ್ಚು ಪುಟದ ಸಮಗ್ರ ಮಾಹಿತಿಯುಳ್ಳ ವರದಿ ಹಾಗೂ ಮನವಿ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಯಾದರೆ, ಬೆಟ್ಟದ ಮೇಲೆ ಗಣಿಗಾರಿಕೆಗೆ ಕಡಿವಾಣ ಹಾಕಿ, ಈ ದೇವಸ್ಥಾನದ ಸುತ್ತಲಿನ 3 ಕಿ.ಮೀ ಸುತ್ತಳತೆಯ ಪ್ರದೇಶವನ್ನು ಗಣಿಗಾರಿಕೆ ನಿಷೇಧಿತ ವಲಯವೆಂದು ಘೋಷಿಸುವುದಾಗಿ ಅವರು ಭರವಸೆ ಸಹ ನೀಡಿದ್ದರು. ಹಿಂದೆ ಕೊಟ್ಟ ಮಾತಿನಂತೆ ಅವರು ಈಗ ನಡೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡುತ್ತೇವೆ’ ಎಂದಿದ್ದಾರೆ.

ಪರಿಷತ್ ಮುಖಂಡ ಟಿ.ಎಂ. ಶಿವಕುಮಾರ್ ಹಾಗೂ ಶ್ರೀಶೈಲ ಆಲ್ದಳ್ಳಿ ಮಾತನಾಡಿ ‘ಸಮುದ್ರ ಮಟ್ಟದಿಂದ 3,500 ಅಡಿ ಎತ್ತರದಲ್ಲಿರುವ, ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನವು ಆಸ್ತಿಕರ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ದೇವಸ್ಥಾನದ ಸುತ್ತಲು ವಿವಿಧ ಪ್ರಭೇದದ ಪ್ರಾಣಿ ಪಕ್ಷಿಗಳು ಹಾಗೂ ಸಸ್ಯವರ್ಗವಿದೆ. ಆಮ್ಲಜನಕ ಉತ್ಪಾದನೆಯ ಟ್ಯಾಂಕ್ ಎಂದೇ ಹೆಸರಾಗಿದೆ. ಆದ್ದರಿಂದ ಪಾರಂಪರಿಕ ತಾಣ ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಹನುಮಂತಪ್ಪ, ಎಸ್‌ಯುಸಿಐ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ಸೋಮಶೇಖರ್, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ, ತಾಲ್ಲೂಕು ಸಂಚಾಲಕ ಮಂಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.