ADVERTISEMENT

ಗಣಿ ನಾಡಿಗೆ ಮತ್ತೆ ಕೀರ್ತಿ ತಂದ ಕೊಟ್ಟೂರು

​ಪ್ರಜಾವಾಣಿ ವಾರ್ತೆ
Published 26 ಮೇ 2016, 8:56 IST
Last Updated 26 ಮೇ 2016, 8:56 IST
ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದ ಅನಿತಾಳಿಗೆ ಕೊಟ್ಟೂರು ಪಟ್ಟಣದ ಬಸ್‌ ನಿಲ್ದಾಣದ ಬಳಿ ಬಾಳೆ ಹಣ್ಣು ಮಾರಾಟ ಮಾಡುವ ಬಸಪ್ಪ ಬುಧವಾರ ಬಾಳೆಹಣ್ಣು ತಿನ್ನಿಸಿ ಸಂತಸ ಹಂಚಿಕೊಂಡರು
ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದ ಅನಿತಾಳಿಗೆ ಕೊಟ್ಟೂರು ಪಟ್ಟಣದ ಬಸ್‌ ನಿಲ್ದಾಣದ ಬಳಿ ಬಾಳೆ ಹಣ್ಣು ಮಾರಾಟ ಮಾಡುವ ಬಸಪ್ಪ ಬುಧವಾರ ಬಾಳೆಹಣ್ಣು ತಿನ್ನಿಸಿ ಸಂತಸ ಹಂಚಿಕೊಂಡರು   

ಕೊಟ್ಟೂರು: ‘ಶಿಕ್ಷಣ ಕಾಶಿ’ ಎಂದೇ ಹೆಸರಾಗಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆಯುವ ಮೂಲಕ ಮತ್ತೊಮ್ಮೆ ರಾಜ್ಯದ ಜನತೆಯ ಚಿತ್ತವನ್ನು ಇತ್ತ ಸೆಳೆದಿದೆ.

ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನಲ್ಲಿ ಅನೇಕ ಶಿಕ್ಷಣ ಸಂಸ್ಧೆಗಳು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ರಾಜ್ಯಕ್ಕೆ ಹೆಸರುವಾಸಿಯಾಗಿವೆ.
ಇಂತಹ ಪರಿಸರದಲ್ಲಿ 2006ನೇ ಸಾಲಿನಲ್ಲಿ ಇಂದಿರಾ ಎಜುಕೇಶನ್‌ ಟ್ರಸ್ಟ್ ವತಿಯಿಂದ ಸ್ಧಾಪಿತಗೊಂಡ ‘ಇಂದು ಪದವಿಪೂರ್ವ ಕಾಲೇಜ್‌’ ಕೇವಲ 80 ವಿದ್ಯಾರ್ಥಿಗಳೊಂದಿಗೆ ಪ್ರಾರಂಭ ವಾಯಿತು. ಪ್ರಸಕ್ತ ಸಾಲಿನಲ್ಲಿ 1600 ವಿದ್ಯಾರ್ಥಿಗಳಿದ್ದಾರೆ.

2015ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ನೇತ್ರಾವತಿ ಪ್ರಥಮ ರ್‍ಯಾಂಕ್ ಹಾಗೂ ಮಾಲಿನಿ ದ್ವಿತೀಯ ರ್‍ಯಾಂಕ್‌ಗಳನ್ನು ಪಡೆದಿದ್ದರು. ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ಕಲಾ ವಿಭಾದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ರ್‍ಯಾಂಕ್ ಅಲ್ಲದೇ ಮೂರನೇ, ಐದನೇ ರ್‍ಯಾಂಕ್‌ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಕಲಾ ವಿಭಾಗದಲ್ಲಿ ಅನಿತಾ 585 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್‍್ಯಾಂಕ್ ಪಡೆದರೆ, ಮಂಜಪ್ಪ 580 ಅಂಕಗಳೊಂದಿಗೆ ದ್ವಿತೀಯ ರ್‍ಯಾಂಕ್, ಶ್ರಮಾ ಅಣ್ಣಿಗೇರಿ 574 ಅಂಕಗಳನ್ನು ಪಡೆದು ಮೂರನೇ ರ್‍ಯಾಂಕ್, ವಿನೋದ್ ಹಾಗೂ ಪ್ರಕಾಶ್ 572 ಅಂಕಗಳೊಂದಿಗೆ ಐದನೇ ರ್‍ಯಾಂಕ್ ಹಾಗೂ ವಿಜ್ಙಾನ ವಿಭಾಗದಲ್ಲಿ ಮಹಿಮೇಶ್ 587 ಅಂಕಗಳೊಂದಿಗೆ 8 ನೇ ರ್‍ಯಾಂಕ್ ಪಡೆಯುವ ಮೂಲಕ ಅತಿ ಹೆಚ್ಚು ರ್‍ಯಾಂಕ್ ಗಳನ್ನು ಪಡೆದ ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಈ ಫಲಿತಾಂಶ ನಮಗೆ ಸಂತೋಷ ತಂದಿದೆ. ಇದಕ್ಕೆ ನಮ್ಮ ವಿದ್ಯಾಲಯದ ಉಪನ್ಯಾಸಕರ ಶ್ರಮ ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಕಾರಣ’ ಎಂದು ಪ್ರಾಚಾರ್ಯ ಎಚ್‌.ಎನ್‌. ವೀರಭದ್ರಪ್ಪ ಹೇಳಿದರು.

‘ಜಿಲ್ಲೆಯಲ್ಲಿ ಹೆಸರಾಗಿದ್ದ ನಮ್ಮ ಕಾಲೇಜ್‌ ಇಂದು ರಾಜ್ಯ ಮಟ್ಟದಲ್ಲಿ ಹೆಸರಾಗಲು ಕಾರಣರಾದ ವಿದ್ಯಾರ್ಥಿ ಗಳು ಹಾಗೂ ಉಪನ್ಯಾಸಕರನ್ನು ಅಭಿನಂದಿಸುತ್ತೇನೆ’ ಎಂದು ಸಂಸ್ಧೆಯ ಅಧ್ಯಕ್ಷ ಎಚ್‌.ಎನ್‌. ಚಂದ್ರಶೇಖರ್, ಕಾರ್ಯದರ್ಶಿ ಎಚ್‌.ಎನ್‌. ಸಂತೋಷ್‌ ತಿಳಿಸಿದ್ದಾರೆ.

ಮೆರವಣಿಗೆ: ನಗರದ ಇಂದು ಕಾಲೇಜಿ ನಿಂದ ಸುಪ್ರಸಿದ್ಧ ಕೊಟ್ಟೂರೇಶ್ವರ ಮಠದ ವರೆಗೆ ಸಾರೋಟು ಮೆರವಣಿಗೆಯಲ್ಲಿ ರ್‍ಯಾಂಕ್‌ ವಿದ್ಯಾರ್ಥಿಗಳನ್ನು ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಚಾರ್ಯರು, ಶಿಕ್ಷಕ ವೃಂದ, ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ತಮ್ಮ ಸಂತಸ ಹಂಚಿಕೊಂಡರು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.