ADVERTISEMENT

ಗ್ರಾಮಸ್ಥರಿಗೆ ಆಪ್ತ ಸಮಾಲೋಚನೆ ಇಂದು

ಗೋನಾಳು ಗ್ರಾಮದಲ್ಲಿ ಶಾಂತಿ ನೆಲೆಸಲಿ ಎಂಬ ಸದಾಶಯ; ಘರ್ಷಣೆ ಕೊನೆಗೊಳಿಸುವ ಯತ್ನ

ಕೆ.ನರಸಿಂಹ ಮೂರ್ತಿ
Published 10 ಜೂನ್ 2018, 12:02 IST
Last Updated 10 ಜೂನ್ 2018, 12:02 IST

ಗೋನಾಳು ಗ್ರಾಮದಲ್ಲಿ ಗುಂಪು ಘರ್ಷಣೆ ಬಳಿಕ ಬೀಗ ಹಾಕಿಕೊಂಡ ಮನೆಗಳು ಮತ್ತು ಬಿಕೋ ಎನ್ನುವ ಬೀದಿಗಳಲ್ಲಿ ಜನಜೀವನ ತೆವಳುತ್ತಿದೆ.

ಇಂಥ ಸನ್ನಿವೇಶದಲ್ಲೇ ಜಿಲ್ಲಾಡಳಿತ ಮತ್ತು ಪೊಲೀಸರು ಶಾಂತಿ ಸ್ಥಾಪಿಸುವ ಯತ್ನವನ್ನು ಮುಂದುವರಿಸಿದ್ದಾರೆ. ಅವರ ಪ್ರಯತ್ನಕ್ಕೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿಗಳು ಕೈ ಜೋಡಿಸಿರುವುದು ವಿಶೇಷ.

ಮೇ 25ರಂದು ಘರ್ಷಣೆ ಬಳಿಕ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಮತ್ತು ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ನೇತೃತ್ವದಲ್ಲಿ ಒಮ್ಮೆ ಶಾಂತಿ ಸಭೆಯನ್ನು ನಡೆಸಲಾಗಿದೆ. ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆ ಪ್ರಯತ್ನದ ಮುಂದುವರಿದ ಭಾಗವಾಗಿ, ಸಮಾಜ ಕಾರ್ಯ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಆಪ್ತ ಸಮಾಲೋಚನೆಯನ್ನೂ ನಡೆಸಲಿದ್ದಾರೆ.

ADVERTISEMENT

45 ಮಂದಿ: ವಿಶ್ವವಿದ್ಯಾಲದ ಸಮಾಜ ಕಾರ್ಯ ವಿಭಾಗದ ಸುಮಾರು 45 ವಿದ್ಯಾರ್ಥಿಗಳನ್ನು ಭಾನುವಾರ ಗ್ರಾಮಕ್ಕೆ ಕರೆದೊಯ್ಯಲು ಎರಡು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸನ್ನಿವೇಶದ ಗಾಂಭೀರ್ಯವನ್ನು ಮನವರಿಕೆ ಮಾಡಲು ಎಸ್ಪಿ ಅರುಣ್ ರಂಗರಾಜನ್‌ ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಂಜೆ ಸಭೆಯನ್ನೂ ನಡೆಸಿದರು.

ಹೊಸ ಅನುಭವ: ‘ಸಮಾಜಕಾರ್ಯ ವಿಭಾಗದಲ್ಲಿ ಓದುತ್ತಿರುವ ನಮಗೆ ಇಂಥದ್ದೊಂದು ಅವಕಾಶ ದೊರಕಿರುವುದು ಸಂತಸ ತಂದಿದೆ. ಗ್ರಾಮ ಸಮುದಾಯದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ ಜಿಲ್ಲಾಡಳಿತದ ಜೊತೆ ಕೈ ಜೋಡಿಸಿರುವುದು ವಿಶಿಷ್ಟ ಅನುಭವ’ ಎಂದು ವಿದ್ಯಾರ್ಥಿ ಹರೀಶ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ಭಾನುವಾರ ಶಾಂತಿ ಯಾತ್ರೆಯನ್ನು ನಡೆಸಲಾಗುವುದು. ಆ ಸಲುವಾಗಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಒಳಿತು ಮಾಡು ಮನುಷಾ...

ಬಳ್ಳಾರಿ: ಶಾಂತಿ ಸ್ಥಾಪನೆ ಯತ್ನದಲ್ಲಿ ಚಿಗುರು ಕಲಾತಂಡದ ಗಾಯಕರು ಸೌಹಾರ್ದ ಗೀತೆಗಳನ್ನು ಹಾಡಲಿರುವುದು ಮತ್ತೊಂದು ವಿಶೇಷ.

‘ಒಳಿತು ಮಾಡು ಮನುಷಾ... ನೀನಿರೋದು ಮೂರು ದಿವಸಾ’, ‘ಭಾರತ ಮಾತೆಯ ಮಕ್ಕಳು ನಾವು’, ‘ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ’, ‘ಕಾಣದ ಕಡಲಿಗೆ ಹಂಬಲಿಸಿದೇ ಮನಾ’, ‘ಕನಸು ಕಟ್ಟುತ್ತೇವಾ...’ ಹಾಡುಗಳ ಮೂಲಕ ಸೌಹಾರ್ದ ಸಾರಲಿದ್ದಾರೆ.

ತಂಡದ ಎಸ್‌.ಎಂ.ಹುಲುಗಪ್ಪ ನೇತೃತ್ವದಲ್ಲಿ ಹನುಮಯ್ಯ, ಡಿ.ಆನಂದ್‌, ರಮೇಶ್, ಕೆ.ಜಡೆಯಪ್ಪ, ಯರಿಸ್ವಾಮಿ, ಸುಂಕಪ್ಪ ಅವರ ಗಾಯನದಿಂದ ಗ್ರಾಮಸ್ಥರಲ್ಲಿ ಸೌಹಾರ್ದ ಭಾವ ಮೂಡಲಿ ಎಂಬ ನಿರೀಕ್ಷೆ ಇದೆ’ ಎಂಬುದು ಎಸ್ಪಿ ಅರುಣ್‌ ರಂಗರಾಜನ್‌ ಅವರ ಅಭಿಪ್ರಾಯ.

ಶಾಂತಿ ಸ್ಥಾಪನೆಯ ನಮ್ಮ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ, ಗ್ರಾಮ ಸಮುದಾಯ ನೆಮ್ಮದಿಯಿಂದ ಬದುಕುವುದು ಮುಖ್ಯ
 -  ಅರುಣ್ ರಂಗರಾಜನ್‌, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.