ADVERTISEMENT

ಚುರುಕಾದ ಗಾಂಧಿ ಭವನ ನಿರ್ಮಾಣ!

ಗಾಂಧಿ ವಿಚಾರಗಳ ಪ್ರಚಾರದ ಉದ್ದೇಶ; ಕಳೆದ ಬಜೆಟ್‌ನಲ್ಲೇ ಘೋಷಣೆಯಾಗಿದ್ದ ಯೋಜನೆ

ಕೆ.ನರಸಿಂಹ ಮೂರ್ತಿ
Published 12 ಜೂನ್ 2018, 10:15 IST
Last Updated 12 ಜೂನ್ 2018, 10:15 IST
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧಿ ಭವನ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧಿ ಭವನ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ   

ಬಳ್ಳಾರಿ: ಮಹಾತ್ಮ ಗಾಂಧೀಜಿ ಚಿಂತನೆಗಳತ್ತ ಜನ ಸಮುದಾಯವನ್ನು ಸೆಳೆಯುವ ಉದ್ದೇಶವುಳ್ಳ ಗಾಂಧಿ ಭವನ ನಿರ್ಮಾಣ ಕಾರ್ಯ ನಗರದಲ್ಲಿ ಭರದಿಂದ ಸಾಗಿದೆ.

ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಗಾಂಧಿ ಚಿಂತನೆಗಳ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ವರ್ಷಪೂರ್ತಿ ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂಬ ಆಶಯವೂ ಇಲ್ಲಿದೆ. ಅದಕ್ಕಾಗಿ ಸ್ಥಳೀಯ ವಿಶ್ವವಿದ್ಯಾಲಯಗಳು ಮತ್ತು ಎನ್‌.ಎಸ್‌.ಎಸ್‌ ಘಟಕಗಳ ಸಹಯೋಗವನ್ನೂ ಪಡೆಯಲಾಗುತ್ತದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 2016–17ನೇ ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ
ಗಾಂಧಿ ಭವನಗಳನ್ನು ರಾಜ್ಯದ ಎಲ್ಲ ಮೂವತ್ತು ಜಿಲ್ಲೆಗಳಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದರು. ಎಲ್ಲ ಜಿಲ್ಲೆಗಳಲ್ಲಿ ಭವನದ ಹೊರಾಂಗಣ ರಚನೆ ಏಕರೂಪದಲ್ಲಿರುವಂತೆ ನಿರ್ಮಿಸುತ್ತಿರುವುದು ವಿಶೇಷ.

ADVERTISEMENT

ವಿಳಂಬ: ಬಜೆಟ್‌ನಲ್ಲಿ ಘೋಷಣೆಯಾದರೂ ಆ ವರ್ಷವೇ ಅನುದಾನ ಬಿಡುಗಡೆಯಾಗಲಿಲ್ಲ. ಹಿಂದಿನ ವರ್ಷ ಬಿಡುಗಡೆಯಾದ ಬಳಿಕ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಹಣ ಮಂಜೂರು ಮಾಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸ್ಪಂದನ ಕೇಂದ್ರದ ಮುಂಭಾಗದಲ್ಲಿ ನಿಗಮವು ಕಟ್ಟಡ ನಿರ್ಮಾಣ ಕಾರ್ಯವನ್ನು ನಡೆಸುತ್ತಿದೆ.

ಏನೇನು?: ‘ಗಾಂಧಿ ಭವನದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಒಳಗೆ ಒಂದು ಸಭಾಂಗಣ, ಗಾಂಧಿ ಚಿಂತನೆಗಳು ಪ್ರಧಾನವಾಗಿ ಉಳ್ಳ ಚಿತ್ರ ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕೊಠಡಿಗಳನ್ನೂ ನಿರ್ಮಿಸಲಾಗುವುದು’ ಎಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ’ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

18 ತಿಂಗಳ ಗಡುವು: ’ಭವನ ನಿರ್ಮಾಣಕ್ಕೆ 18 ತಿಂಗಳ ಗಡುವನ್ನು ನೀಡಲಾಗಿದೆ. ಕೆಲವು ತಿಂಗಳ ಹಿಂದೆ ನಿರ್ಮಾಣ ಕಾರ್ಯ ಆರಂಭವಾಗಿದ್ದು,ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ನಂತರ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಗೌರವ ಸಲಹಾ ಸಮಿತಿ...

ಬಳ್ಳಾರಿ: ಗಾಂಧೀ ಭವನದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗೌರವ ಸಲಹಾ ಸಮಿತಿಯನ್ನು ರಚಿಸಲು ಅವಕಾಶ ನೀಡಲಾಗಿದೆ. ‘ಗಾಂಧೀವಾದದಲ್ಲಿ ಮತ್ತು ಗಾಂಧೀಜಿ ಪ್ರಣೀತವಾದ ಚಟುವಟಿಕೆಗಳಲ್ಲಿ ನಂಬಿಕೆಯುಳ್ಳ ಮತ್ತು ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳುಳ್ಳ ಏಳು ಮಂದಿಯ ಸಮಿತಿಯನ್ನು ರಚಿಸಿಕೊಂಡು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ರಾಮಲಿಂಗಪ್ಪ ತಿಳಿಸಿದರು.

‘ಕೇಂದ್ರ ಕಚೇರಿಯಲ್ಲಿ ರಚನೆಯಾಗಿರುವ ಸಮಿತಿಯಿಂದ ಸಲಹೆಗಳನ್ನು ಪಡೆಯಲಾಗಿದೆ. ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಜಿಲ್ಲೆಯ ಸಮಿತಿಯನ್ನು ರಚಿಸಲಾಗುವುದು’ ಎಂದರು.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಗಾಂಧೀಭವನ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿದೆ
ಬಿ.ಕೆ.ರಾಮಲಿಂಗಪ್ಪ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.