ADVERTISEMENT

ಜಾನಪದ ಬಂಡಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 10:20 IST
Last Updated 3 ಫೆಬ್ರುವರಿ 2012, 10:20 IST

ಹೂವಿನಹಡಗಲಿ: ಜಾನಪದವು ಸಂಸ್ಕೃತಿ, ಸಂಸ್ಕಾರಗಳನ್ನು ಒಳಗೊಂಡ ಶ್ರೀಮಂತ ಸಂಪತ್ತಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ್ ಹೇಳಿದರು. ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ತಾಲ್ಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಕಾಲೇಜಿಗೊಂದು ಜಾನಪದ ಬಂಡಿ ಎಂಬ ನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
.
ಆಧುನಿಕ ಯುಗದ ಭರಾಟೆಯ ಬೆಳವಣಿಗೆಯಲ್ಲಿ ನಮ್ಮಿಂದ ಕೈಬಿಟ್ಟು ಹೋಗುತ್ತಿರುವ ಜಾನಪದ ಕಲಾ ಸಾಹಿತ್ಯ ಪ್ರಕಾರಗಳನ್ನು ಮಕ್ಕಳಿಗೆ ಪರಿಚಯಿಸುವುದರ ಮೂಲಕ ಉಳಿಸಿಕೊಳ್ಳಬೇಕಾಗಿದೆ ಎಂದರು.
ಜಾನಪದ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಲ್. ಖಾದರ ಬಾಷಾ ಮಾತನಾಡಿ ಕರ್ನಾಟಕ ಜಾನಪದ ಪರಿಷತ್‌ನ ರಾಜ್ಯ ಘಟದ ಅಧ್ಯಕ್ಷರಾಗಿದ್ದ ಸ್ವಾತಂತ್ರ ಹೋರಾಟ ಗಾರ ಡಾ.ಜಿ. ನಾರಾಯಣ ಸ್ಮರಣಾರ್ಥವಾಗಿ `ಶಾಲಾ ಕಾಲೇಜಿ ಗೊಂದು ಜಾನಪದ ಬಂಡಿ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲ್ಲೂಕಿನ ಎಲ್ಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಕಲಾ ಪ್ರಕಾರಗಳಾದ ಜಾನಪದ ನೃತ್ಯ, ದೊಡ್ಡಾಟ, ಸಣ್ಣಾಟ, ಡೊಳ್ಳು ಕುಣಿತ, ಹೆಜ್ಜೆಮೇಳ, ಹಾಗೂ ಸೋಬಾನೆಪದ, ಸುಗ್ಗಿ ಹಾಡು, ಲಾವಣಿ, ಗೀಗೀಪದ, ಹಂತಿಪದ, ಸೇರಿದಂತೆ ಅನೇಕ ಪ್ರಕಾರ ಗಳನ್ನು ಮರೆಯದಂತೆ ಕಲಿಸುವುದೇ ಈ ಒಂದು ಕಾರ್ಯಕ್ರಮದ ಮೂಲ ಉದ್ದೆೀಶವಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಜಾನಪದ ಸಾಹಿತ್ಯ ಸಂಸ್ಕೃತಿಯ ಅರಿವು ಎಂಬ ವಿಷಯದ ಬಗ್ಗೆ ರುದ್ರಾಂಬಾ ಎಂ.ಪಿ.ಪ್ರಕಾಶ್ ಉಪನ್ಯಾಸ ನೀಡಿದರು.ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಸವರಾಜ್ ಹೆಬ್ಬಾಳ್ ಮಾತನಾಡಿ ಜಾನಪದ ಸೂರ್ಯೋ ದಯದಿಂದ ಸೂರ್ಯಾಸ್ತದವರೆಗೆ ತಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿ ಅಳವಡಿಸಿಕೊಂಡಿದ್ದರು ಎಂದರು.

ವಿವಿದ ಜಾನಪದ ಹಾಡುಗಳ ಮೂಲಕ ಸಂಸ್ಕೃತಿ, ಸಂಪ್ರದಾಯವನ್ನು ಆಚರಣೆಯಲ್ಲಿ ತರುವಂತಹ ಹಾಗೂ ಹಾಸ್ಯ ಅಭಿವ್ಯಕ್ತಿಯನ್ನು ನೈತಿಕ ಪ್ರಜ್ಞೆ ಯಿಂದ ಪ್ರದರ್ಶಿಸುವಂತಹ ಕಲೆ ನಮ್ಮ ಹಿರಿಯರಲ್ಲಿ ಇತ್ತು ಎಂದರು.

ಜಾನಪದ ಕಲಾವಿದರಾದ ಭಜಂತ್ರಿ ನಾಗಪ್ಪ ಮಂಗಳವಾದ್ಯವನ್ನು ನುಡಿಸಿ ದರು. ನಾಗಪ್ಪನವರನ್ನು ಜಾನಪದ ಪರಿಷತ್‌ನ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಎಸ್.ಕೆ.ಜಿ.ಜಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆದ 18 ಕಲಾ ಪ್ರಕಾರಗಳ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪ್ರಾಚಾರ್ಯ ಕೆ.ಹಾಲೇಶ್ ಕಾರ್ಯಕ್ರಮದ ಅಧ್ಯಕ್ಷತೆವಸಿದ್ದರು. ಸಾಹಿತಿ ಶೇಷಗಿರಿರಾವ್ ಹವಾಲ್ದಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಎ. ಕೊಟ್ರಗೌಡ, ಸಿ.ಡಿ.ಎಂ.ಸಿ. ಅಧ್ಯಕ್ಷ ಕೊಟ್ರೇಶ ನಾಯ್ಕ, ರಂಗಭಾರತಿ ಕಲಾವಿದ ಬೆಲ್ಲದ ಕೊಟ್ರಪ್ಪ ಉಪಸ್ಥಿತರಿದ್ದರು. ಬಸವರಾಜ್ ಕೊಳ್ಳಿ ಸ್ವಾಗತಿಸಿದರು. ಮಧು ನಾಯ್ಕ ವಂದಿಸಿದರು. ಡಾ.ಕೆ.ಸತೀಶ್ ಮತ್ತು ಎ.ಉಮಾಪತಿ ನಿರೂಪಿಸಿದರು.

ಶಾಲಾ ವಾರ್ಷಿಕೋತ್ಸವ
ಹಗರಿಬೊಮ್ಮನಹಳ್ಳಿ: ಜಾಗತಿಕವಾಗಿ ನಾನಾ ರಾಷ್ಟ್ರಗಳು ಪೈಪೋಟಿಯಲ್ಲಿ ವೈಜ್ಞಾನಿಕ ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ವಿವಿಧ ಅವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದರೂ, ಅವರಲ್ಲಿ ನೈತಿಕ ಮೌಲ್ಯಗಳು ಕಾಣೆಯಾಗುತ್ತಿವೆ ಎಂದು ಚಳ್ಳಕೇರಿ ಹಾಸ್ಯ ಸಾಹಿತಿ ಪರಮೇಶ್ವರ ಕುದುರಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ರೇಣುಕ ಕಾಲೇಜ್ ಆವರಣದಲ್ಲಿ ಇತ್ತೀಚೆಗೆ ರೇಣುಕ ಸಮೂಹ ಶಿಕ್ಷಣ ಸಂಸ್ಥೆಗಳ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.