ADVERTISEMENT

ಜೆಡಿಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 10:50 IST
Last Updated 24 ಅಕ್ಟೋಬರ್ 2011, 10:50 IST

ಬಳ್ಳಾರಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೆ, ರೈತರಿಗೆ ರಸಗೊಬ್ಬರ ವಿತರಿಸದೆ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರ ಜನಸಾಮಾನ್ಯರ ಅಭ್ಯುದಯವನ್ನೇ ಮರೆತಿದೆ ಎಂದು ಆರೋಪಿಸಿ ಜೆಡಿಎಸ್ ವತಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರ ನೆಮ್ಮದಿ ಹಾಳಾಗಿದ್ದು, ಅಧಿಕಾರಿಕ್ಕೆ ಬರುವ ಮುನ್ನ ಬಿಜೆಪಿ ಮುಖಂಡರು ರೈತರಿಗೆ ವಿದ್ಯುತ್ ಉಚಿತ ನೀಡಲಾಗುವುದು, ಜನತೆಗೆ ಮೂಲಸೌಕರ್ಯ ಒದಗಿಸಲಾಗುವುದು ಎಂಬ ಭರವಸೆ ನೀಡಿದ್ದರಾದರೂ, ಈವರೆಗೆ ಭರವಸೆ ಈಡೇರಿಸಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಸೂರ್ಯನಾರಾಯಣ ರೆಡ್ಡಿ ಆರೋಪಿಸಿದರು.

ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿಮಾಡಿರುವ ಸರ್ಕಾರ, ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದ್ದರೂ ಅಲ್ಲಿಂದ ವಿದ್ಯುತ್ ಖರೀದಿಸಿಲ್ಲ. ಜನರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದ ಸರ್ಕಾರ ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವತ್ತ ಆಲೋಚಿಸಬೇಕು ಎಂದು ಅವರು ಕೋರಿದರು.

ಮೈಸೂರು, ಬೆಂಗಳೂರು, ಶಿವಮೊಗ್ಗ ಹಾಗೂ ಮಂಗಳೂರು ಜಿಲ್ಲೆಗೆ ಸಮಪರ್ಕ ವಿದ್ಯುತ್ ಪೂರೈಕೆಯಾಗುತ್ತಿದೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು ಇದ್ದರೂ ವಿದ್ಯುತ್ ಪೂರೈಸಲಾಗುತ್ತಿಲ್ಲ ಎಂದು ಅವರು ದೂರಿದರು.

ಅಲ್ಲದೆ, ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ರೈತರಿಗೆ ರಸಗೊಬ್ಬರ ಪೂರೈಸುವುದಕ್ಕೆ ಸಂಬಂಧಿಸಿದಂತೆ ದ್ವಿಮುಖ ನೀತಿ ಅನುಸರಿಸುತ್ತಿದೆ. ಭ್ರಷ್ಟಾಚಾರ ಕುರಿತು ಆ ಪಕ್ಷ ಚಕಾರ ಎತ್ತದಿರುವುದು ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಖಂಡರ   ಪಾಲಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.

ಸಾಲಿ ಸಿದ್ದಯ್ಯಸ್ವಾಮಿ, ಮುಂಡ್ರಿಗಿ ನಾಗರಾಜ್, ಮಾಜಿ ಶಾಸಕ ಚಂದ್ರಯ್ಯ ಸ್ವಾಮಿ,  ಮಂಜುನಾಥ, ಮೀನಳ್ಳಿ ತಾಯಣ್ಣ, ಭಾಸ್ಕರ್ ರೆಡ್ಡಿ, ಜ್ಯೋತಿಪ್ರಕಾಶ್, ಸುಮಂಗಳಮ್ಮ, ವಿಜಯಲಕ್ಷ್ಮಿ, ಸೋಮಲಿಂಗನಗೌಡ, ಚಂದ್ರ, ದುರುಗಣ್ಣ, ಪಾಟೀಲ್, ಆರ್.ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.