ADVERTISEMENT

‘ಟಿಕೆಟ್‌ ಕೊಡದಿದ್ದರೆ ಕಾಂಗ್ರೆಸ್‌ ಸೋಲಿಸಲು ಯತ್ನ’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 6:56 IST
Last Updated 26 ಡಿಸೆಂಬರ್ 2017, 6:56 IST
ಯರಿಕುಲಸ್ವಾಮಿ
ಯರಿಕುಲಸ್ವಾಮಿ   

ಬಳ್ಳಾರಿ: ‘ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ಕ್ಷೇತ್ರದ ಪೈಕಿ ಒಂದು ಕಡೆ 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಮೂಲ ಕಾಂಗ್ರೆಸಿನ ಮಾದಿಗ ಸಮುದಾಯದವರಿಗೇ ಟಿಕೆಟ್‌ ನೀಡಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಸೋಲಿಸಲು ಕಾರ್ಯತಂತ್ರ ರೂಪಿಸುತ್ತೇವೆ. ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತೇವೆ’ ಎಂದು ಡಾ.ಬಿ.ಆರ್‌.ಅಂಬೇಡ್ಕರ್ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಯರಿಕುಲ ಸ್ವಾಮಿ ತಿಳಿಸಿದರು.

‘ಲಂಬಾಣಿ ಸಮುದಾಯಕ್ಕೆ ಟಿಕೆಟ್‌ ನೀಡುವ ನಿರ್ಧಾರ ಕೈಗೊಳ್ಳುವುದಾದರೆ ಮರಿಯಮ್ಮನಹಳ್ಳಿಯ ಆಕಾಂಕ್ಷಿ ಕೃಷ್ಣಾನಾಯಕ ಅವರಿಗೇ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುವುದು’ ಎಂದು ನಗರದಲ್ಲಿ ಸೋಮವಾರ ವಿವಿಧ ದಲಿತ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಾದಿಗ ಸಮುದಾಯದ ಎಲ್‌,ಮಾರೆಣ್ಣ, ಹೆಗಡಾಳು ರಾಮಣ್ಣ, ಸಿ.ಬಸವರಾಜು, ಬಲ್ಲಹುಣ್ಸಿ ರಾಮಣ್ಣ, ಎಚ್.ಸತ್ಯನಾರಾಯಣ ಸೇರಿ ಆರು ಆಕಾಂಕ್ಷಿಗಳಿದ್ದಾರೆ. ಅವರ ಪೈಕಿ ಯಾರಿಗೇ ನೀಡಿದರೂ ಸಂಘಟನೆಗಳು ಅವರ ಗೆಲುವಿಗೆ ಶ್ರಮಿಸುತ್ತವೆ. ಅವರನ್ನು ಹೊರತುಪಡಿಸಿ ಪಕ್ಷಾಂತರಿಗಳಿಗೆ ನೀಡಿದರೆ ಕಾಂಗ್ರೆಸ್‌ಗೆ ಸೋಲು ಖಚಿತ’ ಎಂದರು.

ADVERTISEMENT

‘ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಎಸ್‌.ಭೀಮಾನಾಯ್ಕ ಅವರಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದರೆ ಅವರ ಸೋಲಿಗಷ್ಟೇ ಅಲ್ಲದೆ, ಜಿಲ್ಲೆಯ ಎಲ್ಲೆಡೆ ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡುತ್ತೇವೆ. ಮಾದಿಗ ಜನಸಂಖ್ಯೆಯ ಬಲದ ಕುರಿತು ಹೈಕಮಾಂಡ್‌ಗೆ ತಪ್ಪು ವರದಿ ಕೊಟ್ಟಿರುವ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಎಲ್ಲಿಯೇ ಸ್ಪರ್ಧಿಸಿದರೂ ಅವರೂ ಸೋಲುವಂತೆ ಮಾಡುತ್ತೇವೆ’ ಎಂದರು.

ಸಿಎಂ ಭೇಟಿ: ‘ಹಗರಿಬೊಮ್ಮನಹಳ್ಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೂಲಕಾಂಗ್ರೆಸಿಗರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದೇವೆ. ಚುನಾವಣಾ ವೀಕ್ಷಕರು, ಬ್ಲಾಕ್‌ ಕಾಂಗ್ರೆಸ್‌ ಮುಖಂಡರಿಂದ ವರದಿ ಪಡೆದ ಬಳಿಕ ನಿರ್ಧರಿಸುವುದಾಗಿ ಅವರು ತಿಳಿಸಿದರು’ ಎಂದರು.

‘ಮಾದಿಗ ಸಮುದಾಯದವರಿಗೆ ಈ ಹಿಂದೆ ಟಿಕೆಟ್‌ ಸಿಕ್ಕಿದ್ದರೂ ಸ್ಥಳೀಯ ಸಮಸ್ಯೆಗಳ ಕಾರಣದಿಂದ ಅಭ್ಯರ್ಥಿಗಳು ಸೋಲನುಭವಿಸಬೇಕಾಯಿತು. ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ. ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ’ ಎಂದರು.

‘ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಬಿಜೆಪಿ ಸರ್ಕಾರವನ್ನು ಆಗ್ರಹಿಸುತ್ತಿದ್ದರು. ಈಗ ಅವರ ನೇತೃತ್ವದ ಸರ್ಕಾರ ನಾಲ್ಕೂವರೆ ವರ್ಷ ಅಧಿಕಾರವನ್ನು ಪೂರ್ಣಗೊಳಿಸಿದ ಬಳಿಕವೂ ವರದಿ ಜಾರಿಗೆ ಆಸಕ್ತಿ ತೋರದೇ ಇರುವುದು ವಿಷಾದನೀಯ’ ಎಂದರು.

ಆಕಾಂಕ್ಷಿಗಳ ದನಿ: ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಆರೂ ಆಕಾಂಕ್ಷಿಗಳು ಗೋಷ್ಠಿಯ ವೇದಿಕೆಗೆ ಬರದೇ ಇದ್ದರೂ, ಸಭಿಕರ ಸಾಲಿನಿಂದಲೇ ಮುಖಂಡರ ಮಾತಿಗೆ ದನಿಗೂಡಿಸಿದರು. ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಎ.ಈಶ್ವಪರಪ್ಪ, ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಜಗನ್ನಾಥ್‌, ಛಲವಾದಿ ಮಹಾ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ನರಸಪ್ಪ, ಬಾಬು ಜಗಜೀವನರಾಮ್‌ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪಂಪಾಪತಿ, ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ತಳವಾರ ಈಶ್ವರಪ್ಪ, ಜಿಲ್ಲಾ ಸಂಚಾಲಕ ಕೆ.ವೆಂಕಟೇಶ ಮೂರ್ತಿ ಪಾಲ್ಗೊಂಡಿದ್ದರು.

‘ಸಿದ್ಧಾಂತ ಬದ್ಧತೆ ಇಲ್ಲದ ಕಾಂಗ್ರೆಸ್‌’

‘ಕಾಂಗ್ರೆಸ್‌ಗೆ ಸಿದ್ಧಾಂತದ ಬದ್ಧತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಜಿ.ಪರ ಮೇಶ್ವರ್‌ ಮುಖ್ಯಮಂತ್ರಿ ಆಗುವ ಅವಕಾಶ ನಿರ್ಮಾಣ ವಾಗಿತ್ತು. ಆದರೆ ಎಲ್ಲ ಪಕ್ಷದವರೂ ಒಗ್ಗಟ್ಟಾಗಿ ಅವರು ಸೋಲುವಂತೆ ಮಾಡಿದರು. ಜಿಲ್ಲೆಯಲ್ಲೂ ಮಾದಿಗ ಸಮುದಾಯದ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಪ್ರಾತಿನಿಧ್ಯ ದೊರಕದೇ ಇದ್ದರೆ, ಸಮುದಾಯ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸುತ್ತದೆ’ ಎಂದು ಜಗನ್ನಾಥ್‌ ಹೇಳಿದರು.

* * 

ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಜನಸಂಖ್ಯೆ ಜಿಲ್ಲೆಯಲ್ಲಿ ಅತಿ ಹೆಚ್ಚಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಆದ್ಯತೆ ನೀಡಲೇಬೇಕು.
ಯರಿಕುಲ ಸ್ವಾಮಿ, ಡಾ.ಬಿ.ಆರ್‌.ಅಂಬೇಡ್ಕರ್ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.