ADVERTISEMENT

ಟ್ರಾಫಿಕ್‌ ಸಿಗ್ನಲ್‌ನ ಅವೈಜ್ಞಾನಿಕ ಸಮಯ

ಅನಂತ ಜೋಶಿ
Published 7 ಅಕ್ಟೋಬರ್ 2013, 6:37 IST
Last Updated 7 ಅಕ್ಟೋಬರ್ 2013, 6:37 IST

ಹೊಸಪೇಟೆ: ನಗರದ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಪೊಲೀಸ್‌ ಇಲಾಖೆ ಹಲವಾರು ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅವುಗಳಲ್ಲಿ ಮುಖ್ಯವಾದುದು ಟ್ರಾಫಿಕ್‌ ಸಿಗ್ನಲ್‌.

ನಗರದಲ್ಲಿ ಹೆಚ್ಚಾಗಿರುವ ಸಂಚಾರ ದಟ್ಟಣೆಯ ನಿವಾರಣೆಗೆ ವಿವಿಧ ವೃತ್ತಗಳಿಗೆ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಆದರೆ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವಳಡಿಸಿರುವ ಈ ಟ್ರಾಫಿಕ್‌ ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬುದು ಸಹ ಅಷ್ಟೇ ಮುಖ್ಯ.
ಸಂಚಾರ ದಟ್ಟಣೆ ನಿವಾರಣೆಗೆ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಿರುವುದು ಸ್ವಾಗತಾರ್ಹ­ವಾದರೂ ಅವುಗಳಿಂದ ಸುಗಮ ಸಂಚಾರ ಸಾಧ್ಯವಾಗದೇ ಕಿರಿ ಕಿರಿಯೇ ಜಾಸ್ತಿಯಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಪುಣ್ಯಮೂರ್ತಿ ವೃತ್ತ, ರೋಟರಿ ವೃತ್ತ ಹಾಗೂ ಅಂಬೇಡ್ಕರ್‌ ವೃತ್ತಗಳಲ್ಲಿ ಅಳವಡಿಸಿರುವ ಟ್ರಾಫಿಕ್‌್ ಸಿಗ್ನಲ್‌ಗಳ ಸಮಯ ಅವೈಜ್ಞಾನಿಕವಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಸಿಬ್ಬಂದಿ ಕೊರತೆ ಸರಿದೂಗಿಸಲು ಕೈಗೊಂಡ ಕ್ರಮ ಇದಾದರೂ ಟ್ರಾಫಿಕ್‌ ಸಿಗ್ನಲ್‌ಗಳ ಸಮರ್ಪಕ ನಿರ್ವಹಣೆ ಕೊರತೆಯಿಂದ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ವಾದ.

ನಗರದಲ್ಲಿ ಅಳವಡಿಸಿರುವ ಟ್ರಾಫಿಕ್‌ ಸಿಗ್ನಲ್‌ಗಳಿಗೆ ಅಳವಡಿಸಿರುವ ಅವಧಿ ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಚಾರ ದಟ್ಟಣೆ ಕಡಿಮೆ ಇರುವ ಕಡೆಗೆ ಹೆಚ್ಚಿನ ಸಮಯ ನಿಗದಿಪಡಿಸಲಾಗಿದ್ದು, ಇದರಿಂದ ಟ್ರಾಫಿಕ್‌ ಜಾಮ್‌ ಕಿರಿಕಿರಿ ಈವರೆಗೂ ತಪ್ಪಿಲ್ಲ.

ಸಂಚಾರ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಹೆಚ್ಚಿನ ಸಮಯ ನೀಡಿ ಸಂಚಾರ ಕಡಿಮೆ ಇರುವಡೆ ಕಡಿಮೆ ಸಮಯ ನಿಗದಿಪಡಿಸಬೇಕು. ಅಲ್ಲದೆ ಸಂಚಾರ ನಿಯಮ ಮುರಿಯುವ ವಾಹನ ಸವಾರರಿಗೆ ಸೂಕ್ತ ದಂಡ ವಿಧಿಸಿದರೆ ಸಿಗ್ನಲ್‌ಗಳನ್ನು ಅಳವಡಿಸಿದ್ದಕ್ಕೂ ಸಾರ್ಥಕ­ವಾ­ಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸ್ಥಗಿತಗೊಂಡ ಟ್ರಾಫಿಕ್‌ ಸಿಗ್ನಲ್‌: ಇನ್ನು ಕೆಲವು ವೃತ್ತಗಳಲ್ಲಿರುವ ಟ್ರಾಫಿಕ್‌ ಸಿಗ್ನಲ್‌ಗಳು ಕಾರ್ಯ­ನಿರ್ವಹಿಸುತ್ತಿಲ್ಲ.

ಅವುಗಳನ್ನು ಅಳವಡಿಸಿ­ದಾ­ಗಿನಿಂದಲೂ ಮೂಲ ಸ್ಥಿತಿಯಲ್ಲಿವೆ. ಮುಖ್ಯವಾಗಿ ಮಾರ್ಡನ್‌ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್‌ ಸಿಗ್ನಲ್‌ ಕಾರ್ಯ ಸ್ಥಗಿತಗೊಳಿಸಿ ಅದೇಷ್ಟೋ ವರ್ಷಗಳಾಗಿವೆ. ಇಂಥ ವೃತ್ತಗಳಲ್ಲಿ
ಅತ್ತ ಸಿಬ್ಬಂದಿಯು ಇಲ್ಲ, ಇತ್ತ ಸಿಗ್ನಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಜೊತೆಗೆ ಸರ್ಕಾರದ ಲಕ್ಷಾಂತರ ಸಂಚಾರ ದಟ್ಟಣೆ ಇರುವ ಪಟ್ಟಣ­ಗಳಲ್ಲಿ ಸಂಚಾರ ನಿಯಂತ್ರಿಸಲು ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸಲು ಆಯ್ಕೆಯಾದ ಕೆಲ ನಗರಗಳ ಪಟ್ಟಿಯಲ್ಲಿದ್ದ ಹೊಸಪೇಟೆ ಲಕ್ಷಾಂ­ತರ ವೆಚ್ಚದಲ್ಲಿ ಅಳವಡಿಸಿದ ಟ್ರಾಫಿಕ್‌ ಸಿಗ್ನಲ್‌­ಗಳು  ಸಂಚರಿಸುವ ಸಾರ್ವಜನಿಕರಿಗೆ ಅನುಕೂಲ­ವಾ­ಗುವ ಬದಲಾಗಿ ಕಿರಿಕಿರಿ ಉಂಟುಮಾಡುತ್ತಿವೆ. 

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಿವೈಎಸ್‌ಪಿ ಡಿ.ಡಿ.ಮಾಳಗಿ ಟ್ರಾಫಿಕ್‌ ಸಿಗ್ನಲ್‌ಗಳಿಗೆ ನಿಗದಿಪಡಿಸಿರುವ ಸಮಯದಲ್ಲಿ ಏರುಪೇರಾಗಲು ತಾಂತ್ರಿಕ ಸಮಸ್ಯೆ ಕಾರಣವಾಗಿದ್ದು, ಸ್ಥಳೀಯವಾಗಿ ದುರಸ್ಥಿ ಮಾಡಿಸಲಾಗಿದೆ. ತಂತ್ರಜ್ಞರೊಂದಿಗೆ ಚರ್ಚಿಸಿ ಸಮರ್ಪಕ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಾಹನ ಸವಾರರ ಗೊಂದಲ ನಿವಾರಿಸಲು ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸ್‌ ಇಲಾಖೆ ಶೀಘ್ರವೇ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಸೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT