ADVERTISEMENT

ಡೆಂಗಿ ಭೀತಿ: ವೈದ್ಯರ ತಂಡ ಭೇಟಿ

ಬಳ್ಳಾರಿ, ಹೊಸಪೇಟೆಯ ಖಾಸಗಿ ಆಸ್ಪತ್ರೆಗಳಲ್ಲಿ 30–40 ಮಂದಿ ದಾಖಲು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2016, 5:32 IST
Last Updated 19 ಆಗಸ್ಟ್ 2016, 5:32 IST
ಡೆಂಗಿ ಭೀತಿ ಆವರಿಸಿದರು ಸಂಡೂರು ತಾಲ್ಲೂಕಿನ ಗಿರೆನಳ್ಳಿ ಗ್ರಾಮಕ್ಕೆ ಗುರುವಾರ ಜಿಲ್ಲಾ ಮಲೇರಿಯಾ ಅಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು
ಡೆಂಗಿ ಭೀತಿ ಆವರಿಸಿದರು ಸಂಡೂರು ತಾಲ್ಲೂಕಿನ ಗಿರೆನಳ್ಳಿ ಗ್ರಾಮಕ್ಕೆ ಗುರುವಾರ ಜಿಲ್ಲಾ ಮಲೇರಿಯಾ ಅಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು   

ಗಿರೇನಳ್ಳಿ (ಸಂಡೂರು): ತಾಲ್ಲೂಕಿನ ನಿಡಗುರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿರೆನಳ್ಳಿ ಗ್ರಾಮದಲ್ಲಿ ಡೆಂಗಿ ಭೀತಿ ಆವರಿಸಿದ್ದು, ಗ್ರಾಮದ ಹಲವರು ಹೊಸಪೇಟೆ, ಬಳ್ಳಾರಿ ಮುಂತಾದೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ಕುರಿತು ವಿವರಿಸಿದ ಗ್ರಾಮದ ಮುಖಂಡ ಗೋವಿಂದಪ್ಪ, ಗ್ರಾಮದಲ್ಲಿ ಕೆಲ ದಿನಗಳಿಂದ ಜ್ವರದ ಭೀತಿ ಆವರಿಸಿದೆ. ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ 30–40 ಮಂದಿ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದಾರೆ.

ಬಹುತೇಕ ಮನೆಗಳಲ್ಲಿ ಜ್ವರಪೀಡಿತರಿದ್ದಾರೆ.  7–8 ಜನ ಇನ್ನೂ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಗುರುವಾರವೂ ಸಹ 3–4 ಜನರು ಚಿಕಿತ್ಸೆಗಾಗಿ ಹೊಸಪೇಟೆಗೆ ತೆರಳಿದ್ದಾರೆ. ಕೆಲವರಲ್ಲಿ ಪ್ಲೆಟ್‌ಲೆಟ್ಸ್‌ ಕಡಿಮೆ ಯಾಗಿದ್ದು, ಅವರಿಗೆ ಡೆಂಗಿ ಪಾಸಿಟಿವ್‌ ಎಂದು ಬಂದಿದೆ. ಸ್ಥಳಕ್ಕೆ ಆಗಮಿಸಿದ ವೈದ್ಯರು ಇದು ಡೆಂಗಿ ಅಲ್ಲ; ವೈರಲ್‌ ಜ್ವರ. ಮಲೇರಿಯಾ ಇದ್ದರೂ ಈ ರೀತಿ ಪ್ಲೆಟ್‌ಲೆಟ್ಸ್‌  ಕಡಿಮೆಯಾಗುತ್ತವೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮದ ಜನರಲ್ಲಿ ಡೆಂಗಿ ಭೀತಿ ಆವರಿಸಿದೆ ಎಂದರು.

ವೈದ್ಯರ ತಂಡ ಭೇಟಿ: ವಿಷಯ ತಿಳಿದು ಜಿಲ್ಲಾ ಮಲೇರಿಯಾ ಅಧಿಕಾರಿ ಓಂ ಪ್ರಕಾಶ್ ಕಟ್ಟಿಮನಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗೋಪಾಲ್‌ರಾವ್, ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಚಂದ್ರಪ್ಪ, ಡಾ.ವಿನೋದ್, ಡಾ.ಸತೀಶ್ ಮತ್ತವರ ಸಿಬ್ಬಂದಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಚಂದ್ರಪ್ಪ, ವಿಷಯ ತಿಳಿದು ನಾವು ಈಗ್ಗೆ 4–5 ದಿನದಿಂದ ಗ್ರಾಮದಲ್ಲಿ ಶಿಬಿರ ಮಾಡಿ, ತಪಾಸಣೆ ನಡೆಸಿದ್ದೇವೆ. ತೀವ್ರ ಜ್ವರದಿಂದ ಬಳಲುತ್ತಿರುವ 8–10 ಜನರ ರಕ್ತದ ಸ್ಯಾಂಪಲ್‌ ಅನ್ನು ಸಂಗ್ರಹಿಸಿದ್ದೇವೆ. ಗ್ರಾಮದ ಶಾಲೆಯ ಹತ್ತಿರದಲ್ಲಿ ಊರಿನ ಚರಂಡಿ ನೀರು ಬಂದು ಸೇರುತ್ತದೆ.

ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಾರ್ವ ಪತ್ತೆಯಾಗಿವೆ. ನೀರು ನಿಲ್ಲದಂತೆ ಮಾಡಲು ಮತ್ತು ಸ್ವಚ್ಛತೆ ಕಾಪಾಡಲು ಮತ್ತು ಫಾಗಿಂಗ್‌ ಮಾಡಲು ಗ್ರಾಮ ಪಂಚಾಯ್ತಿಯವರಿಗೆ ಸೂಚಿಸಲಾಗಿದೆ.

ಡೆಂಗಿ ಜ್ವರ ದೃಢ ಪಟ್ಟಿಲ್ಲ. ಇಲ್ಲಿ ಕಂಡು ಬರುತ್ತಿರುವುದು ವೈರಲ್‌ ಜ್ವರ. 15–20 ಜನರಿಗೆ ಕೆಮ್ಮು ನೆಗಡಿ ಇದೆ. ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.

‘ಕೆಲವರಿಗೆ ಡೆಂಗಿ ಪಾಸಿಟಿವ್ ಎಂದು ಬಂದಿದೆ. ಹೀಗಾಗಿ ಗ್ರಾಮದಲ್ಲಿ ಡೆಂಗಿ ಭೀತಿ ಆವರಿಸಿದೆ’ ಎಂದು ಗ್ರಾಮದ ಮುಖಂಡ ಗೋವಿಂದಪ್ಪ ತಿಳಿಸಿದರು.

***
ಡೆಂಗಿ ದೃಢಪಟ್ಟಿಲ್ಲ. ಪರಿಶೀಲನೆ ನಡೆಸಿದಾಗ ಕೆಲವರಲ್ಲಿ ವೈರಲ್ ಜ್ವರ ಇದೆ. ನಿವಾರಣೆಗೆ ಕ್ರಮಕೈಗೊಳ್ಳಲಾಗಿದೆ.
-ಡಾ.ಚಂದ್ರಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಡ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.