ADVERTISEMENT

ತಯಾರಕರ ಪ್ರತಿಭಟನಾ ರ್ಯಾಲಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 5:45 IST
Last Updated 5 ಮಾರ್ಚ್ 2011, 5:45 IST

ಬಳ್ಳಾರಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸಿದ್ಧ ಉಡುಪು ಕೈಗಾರಿಕೆಗಳ ಮೇಲೆ ಶೇ. 10ರಷ್ಟು ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಜಿಲ್ಲಾ ಸಿದ್ದ ಉಡುಪು ತಯಾರಕರ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿತು.ನಗರದ ಮೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿದ ಸಂಘದ ನೂರಾರು ಪದಾಧಿಕಾರಿಗಳು ಜಿಲ್ಲಾಧಿಕಾ ರಿಗೆ ಮನವಿ ಅರ್ಪಿಸಿದರು.

ಹತ್ತಿ, ನೂಲಿನ ದರ ಹೆಚ್ಚಿರುವುದರಿಂದ ಸಿದ್ಧ ಉಡುಪು ತಯಾರಿಕೆ ವೆಚ್ಚ ಅಧಿಕವಾಗಿ ಕಾರ್ಮಿಕರ ಸಂಬಳ ದುಸ್ತರವಾಗಿದೆ. ಈ ಹಿನ್ನಲೆಯಲ್ಲಿ ತೆರಿಗೆ ವಿಧಿಸಿರುವುದು ಖಂಡನೀಯ ಎಂದು ಅಧ್ಯಕ್ಷ ಸಿ.ಫುಖ್‌ರಾಜ್ ಭೂರತ್ ತಿಳಿಸಿದರು.ನಗರದ ತೇರು ಬೀದಿ ರಸ್ತೆ ಅಗಲೀಕರಣದಿಂದಾಗಿ ಸಿದ್ಧ ಉಡುಪು ತಯಾರಿಕರ ಅಂಗಡಿಗಳು ತೆರವುಗೊಳಿಸಿ, ಎಲ್ಲರೂ ಕೆಲಸವಿಲ್ಲದೆ ಕಂಗಾಲಾಗಿ ಕುಳಿತಿದ್ದು, ಇದೀಗ ಕೇಂದ್ರ ಸರ್ಕಾರ ತೆರಿಗೆ ವಿಧಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ತಿಳಿಸಿದರು.

ಎನ್‌ಡಿಎ ಸರ್ಕಾರ ತೆರಿಗೆ ವಿಧಿಸಿರುವುದನ್ನು ಮನಗಂಡ ಯುಪಿಎ ಅಧಿನಾ ಯಕಿ ಸೋನಿಯಾ ಗಾಂಧಿ ಅಂದಿನ ಪ್ರಧಾನಿಗೆ ತೆರಿಗೆ ವಿಧಿಸಿರುವುದು ಸಿದ್ಧ ಉಡುಪು ತಯಾರಿಕರಿಗೆ ಅನ್ಯಾಯವಾಗುತ್ತದೆ ಎಂದು ಪತ್ರ ಬರೆದಿದ್ದರು, ಆದರೆ ಅವರದೆ ಸರ್ಕಾರದಲ್ಲಿ ತೆರಿಗೆ ವಿಧಿಸಿರುವುದು ಎಲ್ಲ ತಯಾರಕರಿಗೆ ನುಂಗಲಾರದ ತುತ್ತಾಗಿದೆ ಎಂದರು.

ಇಡೀ ರಾಜ್ಯದಲ್ಲಿ ಬಳ್ಳಾರಿಯು ಸಿದ್ಧ ಉಡುಪು ತಯಾರಿಕೆಗೆ ಹೆಸರುವಾಸಿಯಾಗಿದ್ದು 10 ಸಾವಿರಕ್ಕೂ ಅಧಿಕ ಕುಟುಂಬಗಳು ಈ ಉದ್ಯಮವನ್ನೇ ಅವಲಂಬಿಸಿವೆ. ಈ ರೀತಿಯ ದಿಢೀರ್ ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿರುವುದರಿಂದ ಆ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಹೇಳಿದರು.   ಸಂಘದ ಉಪಾಧ್ಯಕ್ಷ ರಾಮಚಂದ್ರರಾವ್, ಮಾಜಿ ಅಧ್ಯಕ್ಷ ಶ್ಯಾಮ್ ಸುಂದರ್, ಕಾರ್ಯದರ್ಶಿ ಲಕ್ಕಿ ಎಂ.ಶ್ಯಾಮ್, ಜಂಟಿ ಕಾರ್ಯದರ್ಶಿ ವಿನಯ ಕುಮಾರ, ಡುಂಗರ್‌ಚಂದ್, ಖಜಾಂಚಿ ಉತ್ತಮ್ ಚಂದ್ ಜೈನ್ ಮತ್ತಿತರರು ಈ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.