ADVERTISEMENT

ತುಂಗಭದ್ರಾ ಹಿನ್ನೀರ ತಟದಲ್ಲಿ ಹಕ್ಕಿಗಳ ಚಿಲಿಪಿಲಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 8:50 IST
Last Updated 15 ಮಾರ್ಚ್ 2012, 8:50 IST

ಮರಿಯಮ್ಮನಹಳ್ಳಿ: ಸಮೀಪದ ತುಂಗಭದ್ರ ಜಲಾಶಯದ ಹಿನ್ನೀರಿನ ತಟದಲ್ಲಿ ಈಗ  ವಲಸೆಗಳ ಹಕ್ಕಿಗಳ ಕಲರವ ಕಂಡು ಬರುತ್ತಿದ್ದೆ. ವಿವಿಧ  ಭಾಗಗಳಿಂದ ಬಂದ ವಿವಿಧ ಜಾತಿಯ ವಲಸೆ ಹಕ್ಕಿಗಳು ಹಿನ್ನೀರಿನ ಪ್ರದೇಶದಲ್ಲಿ ಬೀಡುಬಿಟ್ಟವೆ. ವಲಸೆ ಅತಿಥಿಗಳ ಆಗಮನದಿಂದ ಹಿನ್ನೀರಿನ ನದಿ ಪಾತ್ರಕ್ಕೆ ವಿಶೇಷ ಕಳೆ ಬಂದಿದೆ.

ಹಿಮಾಲಯ, ಸೈಬೀರಿಯಾ, ಟಿಬೆಟ್, ಮಂಗೋಲಿಯಾ ಮುಂತಾದ ಉತ್ತರ ಭೂಭಾಗದ ನೀರು ಚಳಿಗೆ ಹೆಪ್ಪುಗಟ್ಟುತ್ತಿದ್ದಂತೆ ದಕ್ಷಿಣಕ್ಕೆ ಅನೇಕ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಈ ಜಲಾಶಯ ಹಿನ್ನೀರಿನ ಈ ಭಾಗದ ಪ್ರದೇಶಗಳಾದ ಸಮೀಪದ ಹಂಪಿನಕಟೆ, ಲೋಕಪ್ಪನಹೊಲ, ನಾರಾಯಣದೇವರ ಕೆರೆ ಸೇರಿದಂತೆ ನೂರಾರು ಕಿ.ಮೀ ಬಹುಭಾಗದ ಹಿನ್ನೀರಿನ ಪಾತ್ರದಲ್ಲಿ ಚಳಿಗಾಲದಲ್ಲಿ ಅಪಾರ ಸಂಖ್ಯೆಯಲ್ಲಿ ವಲಸೆ ಹಕ್ಕಿಗಳು ಲಗ್ಗೆಯಿಡುತ್ತವೆ. 

 ಇನ್ನು ಒಂದು ತಿಂಗಳ ಕಾಲ ಇಲ್ಲೇ ಬೀಡುಬಿಟ್ಟು, ನಂತರ ತನ್ನ ತಾಯ್ನಾಡಿಗೆ ವಾಪಾಸಾಗುತ್ತವೆ. ಅಲ್ಲದೆ ಇವುಗಳು ತೆರಳಿದ ನಂತರ ಇನ್ನು ಹಲವಾರು ಪ್ರಬೇಧದ ಪಕ್ಷಿಗಳು ಬೇಸಿಗೆ ಆರಂಭಕ್ಕೆ ಆಗಮಿಸಿ ಬೇಸಿಗೆ ಮಳೆಗಾಲ ಶುರುವಾಗುತ್ತಿದ್ದಂತೆ ಮತ್ತೆ ತನ್ನ ತವರಿಗೆ ಮರಳುತ್ತವೆ. ವಲಸೆ ಹಕ್ಕಿಗಳ ಆಗಮನ ಪಕ್ಷಿಪ್ರಿಯರಿಗೆ ಸಂತಸ ಉಂಟು ಮಾಡಿದೆ.

  ಮುಖ್ಯವಾಗಿ ಈ ಹಿನ್ನೀರಿನ ಪಾತ್ರದಲ್ಲಿ ಸಿಗುವ ಸಮೃದ್ಧ ಆಹಾರ ಮತ್ತು ಸುರಕ್ಷತೆಯ ದೃಷ್ಟಿಯಿಂದಾಗಿ ಅಪಾರ ಸಂಖ್ಯೆಯ ವಲಸೆ ಹಕ್ಕಿಗಳು ಬಂದು ನೆಲಸುತ್ತವೆ. ಅಲ್ಲದೆ ಸಮೃದ್ಧ ಜಲರಾಶಿಯ ಜತೆಗೆ ದಡದಲ್ಲಿ ಸಿಗುವ ಕಪ್ಪೆಚಿಪ್ಪುಗಳು, ಹುಳುಗಳು, ಸೀಗಡಿ, ಮೀನು ಇತ್ಯಾದಿ ಸಮೃದ್ಧ ಆಹಾರವನ್ನು ತಿನ್ನುತ್ತಾ ಹಿನ್ನೀರಿನಲ್ಲಿ ವಿಹರಿಸುತ್ತವೆ. ಕೆಲವು ಪ್ರಬೇಧದ ಹಕ್ಕಿಗಳು ನಡುಗಡ್ಡೆಯನ್ನೇ ಆಶ್ರಯಿಸುತ್ತವೆ.

 ಇದರಲ್ಲಿ ಮುಖ್ಯವಾಗಿ ಇಲ್ಲಿ ಕಂಡು ಬರುವ ಜಲಪಕ್ಷಿಗಳೆಂದರೆ ವಿವಿಧ ಬಗೆಯ ಬೆಳ್ಳಕ್ಕಿಗಳು (ಕ್ಯಾಟಲ್ ಈಗ್ರೇಟ್, ಲಿಟಲ್ ಈಗ್ರೇಟ್ ಇತ್ಯಾದಿ), ವಿವಿಧ ಬಗೆಯ ಬಕಪಕ್ಷಿಗಳಾದ, ಬೂದು ಬಣ್ಣದ ಬಕ ಪಕ್ಷಿ, ನೇರಳೆ ಬಣ್ಣದ ಬಕ ಪಕ್ಷಿ, ಕೊಳದ ಬಕ ಪಕ್ಷಿಗಳು (ಪಾಂಡ್ ಹೆರಾನ್, ಪರ್ಪಲ್ ಹೆರಾನ್, ಗ್ರೇ ಹೆರಾನ್) ಹೆಚ್ಚಾಗಿ ಕಂಡು ಬಂದಿದೆ.  ವಿವಿಧ ಜಾತಿಯ ಕೊಕ್ಕರೆಗಳಾದ (ವೈಟ್ ಐಬೀಸ್, ಬ್ಲಾಕ್ ಐಬೀಸ್), ತೆರೆದ ಕೊಕ್ಕಿನ ಕೊಕ್ಕರೆ, ಬಣ್ಣದ ಕೊಕ್ಕರೆ, ಬಿಳಿಕತ್ತಿನ ಕೊಕ್ಕರೆಗಳು (ಓಪನ್ ಬಿಲ್ ಸ್ಟಾರ್ಕ್, ಪೇಟೆಂಡ್ ಸ್ಟಾರ್ಕ್),  ಹಾಗೂ ಅಪರೂಪದಲ್ಲಿ ಅಪರೂಪದ ರೀವಕ್ಕಿಗಳು (ರಿವರ್ ಟರ್ನ್) ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತವೆ.

 ಇವುಗಳ ಜತೆಗೆ ಚಮಚ ಕೊಕ್ಕು, ಸಣ್ಣ, ದೊಡ್ಡ ನೀರು ಕಾಗೆಗಳು, ಚುಕ್ಕೆ ಬಾತು ಇತ್ಯಾದಿ ವಿವಿಧ ಜಾತಿಯ ಜಲ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಕಂಡು ಬರುತ್ತವೆ. ಮುಖ್ಯವಾದ ವಲಸೆ ಹಕ್ಕಿಗಳೆಂದರೆ ರಾಜಹಂಸ, ಹೆಜ್ಜಾರ್ಲೆ, ಬ್ರೌನ್ ಹೆಡಡ್ ಗಲ್, ರೆಡ್ ಶ್ಯಾಂಕ್, ಗ್ರೀನ್ ಶ್ಯಾಂಕ್, ಗೀರು ತಲೆಯ ಹೆಬ್ಬಾತು, ಕೇಸರಿ ಬಾತು, ವಿವಿಧ ಜಾತಿಯ ಪುಟ್ಟ ಹಕ್ಕಿಗಳು ಅವುಗಳ ಚಿಲಿಪಿಲಿ ಶಬ್ದ ಆಲಿಸಲು ಖುಷಿ ಎನಿಸುತ್ತಿದೆ. ಅಲ್ಲದೆ ಮನುಷ್ಯರ ಸದ್ದಿಗೆ ಓಡಿಹೋಗುವ ಹಕ್ಕಿಗಳು ಮತ್ತೆ ನಡುಗಡ್ಡೆಯನ್ನು ಆಶ್ರಯಿಸುವುದು.

 ಟಿ.ಬಿ.ಡ್ಯಾಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಪಕ್ಷಿಪ್ರೇಮಿ ಸಮದ್ ಕೊಟ್ಟೂರ್ ಹೇಳುವಂತೆ, ಸುಮಾರು 160 ಚದರ ಕಿ.ಮೀ ವ್ಯಾಪ್ತಿಯ ತುಂಗಭದ್ರ ಜಲಾಶಯದ ಇಂದು ಪಕ್ಷಿಗಳ ಸ್ವರ್ಗವಾಗಿದ್ದು, ಅವುಗಳನ್ನು ವೀಕ್ಷಿಸುವುದೇ ಹಬ್ಬವಾಗಿದೆ. ಕಳೆದ 60-70ವರ್ಷಗಳಿಂದ ನೀರು, ಕಡಿಮೆ ಮಾಲಿನ್ಯ, ಸುರಕ್ಷತೆ ಹಾಗೂ ಸಮೃದ್ಧ ಆಹಾರದ ಲಭ್ಯತೆಯ ಕಾರಣದಿಂದ ನೂರಾರು ಜಾತಿಯ ವಿವಿಧ ಜಲ ಹಕ್ಕಿಗಳು ನೆಲೆಗೊಂಡಿವೆ. ಅಲ್ಲದೆ ಅಪರೂಪದಲ್ಲಿ ಅಪರೂಪದ ಪಕ್ಷಿಗಳನ್ನು ಸಹ ನೋಡಬಹುದು. ಹಕ್ಕಿ, ಪಕ್ಷಿಗಳ ಬಗ್ಗೆ ಮಕ್ಕಳಿಗೆ ಇಂದು ಅಗತ್ಯವಾಗಿ ತಿಳಿಸಿ ಹೇಳಬೇಕಾಗಿದೆ. ಅಲ್ಲದೆ ಅವುಗಳ ರಕ್ಷಣೆಯು ಮುಖ್ಯವಾಗಿದೆ. ಇವುಗಳಿಂದ ಮನುಷ್ಯನಿಗೆ ಆಗುವ ಉಪಕಾರ ಲಾಭ ಹಾಗೂ ಪರಿಸರಕ್ಕೆ ನೀಡುವ ಕೊಡುಗೆ ಬಗ್ಗೆ ಮುಖ್ಯವಾಗಿ ಪ್ರೌಢಶಾಲಾ ಮಕ್ಕಳಿಗೆ ವಿವರಿಸಿ ಮಾಹಿತಿ ನೀಡುವುದರೊಂದಿಗೆ ಅವರನ್ನು ಸ್ಥಳಕ್ಕೆ ಕರೆದೊಯ್ದು ವೀಕ್ಷಿಸುವ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.

ಒಟ್ಟಾರೆ ಹಿನ್ನೀರಿನ ಪ್ರದೇಶದಲ್ಲಿ ಸಾಗಿದಷ್ಟು ದೂರಕ್ಕೆ ಹಾರುವ ಹಕ್ಕಿಗಳು, ನೀರಲ್ಲಿ ತೇಲಾಡು ಹಕ್ಕಿಗಳನ್ನು ದೊಡ್ಡ ಬೈನಾಕ್ಯುರ್ ಮೂಲಕ ನೋಡ ಬಹುದು. ದೊಡ್ಡ  ಝೂಮ್‌ವುಳ್ಳ ಕ್ಯಾಮೆರಾಗಳಿಂದ ಛಾಯಾಚಿತ್ರವನ್ನೂ ತೆಗೆಯಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.