ADVERTISEMENT

ದಾಖಲೆಗಳೊಂದಿಗೆ ಆರೋಪ ಮಾಡಲಿ: ಸಿರಾಜ್ ಶೇಖ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:20 IST
Last Updated 20 ಅಕ್ಟೋಬರ್ 2012, 4:20 IST

ಮರಿಯಮ್ಮನಹಳ್ಳಿ:  `ಬಗರ್ ಹುಕುಂ ಜಮೀನಿನ ಬಗ್ಗೆ ಶಾಸಕರು ಮಾಡಿದ ಆಪಾದನೆಗೆ ದಾಖಲೆ ಇದ್ದರೆ ಬಹಿರಂಗಪಡಿಸಲಿ, ಸತ್ಯಾಂಶ ತನ್ನಿಂದ ತಾನೇ ಹೊರಬರುತ್ತದೆ~ ಎಂದು ಬಿಎಸ್‌ಆರ್ ಕಾಂಗ್ರೆಸ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಸಿರಾಜ್ ಶೇಖ್ ಸವಾಲು ಹಾಕಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ನೇಮಿರಾಜ್ ನಾಯ್ಕ ದಾಖಲೆ ಸಮೇತ ಆರೋಪ ಮಾಡಲಿ ಎಂದು ಸವಾಲು ಎಸೆದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವುದರ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿ ನೇಮಿರಾಜ್ ನಾಯ್ಕ ಮುಂದಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು. ನನ್ನ ಅವಧಿಯಲ್ಲಿ 20 ಸಾವಿರ ರೂಪಾಯಿಯಲ್ಲಿ ನಿರ್ಮಿಸಿದಂತಹ ಮನೆಗಳು ಸುಸಜ್ಜಿತವಾಗಿ ಇವೆ. ಗುಣಮಟ್ಟದ ಮನೆ ನಿರ್ಮಾಣಕ್ಕಾಗಿ ಹುಡ್ಕೊ ಸಂಸ್ಥೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜೀವಗಾಂಧಿ ವಸತಿ ಯೋಜನೆಯ ಪರವಾಗಿ ನಾನು ಸ್ವೀಕರಿಸಿದ್ದೆ. ಆದರೆ, ಸಾಮಾನ್ಯ ಜ್ಞಾನ ಇಲ್ಲದ ಶಾಸಕರು ಪ್ರಶಸ್ತಿಯನ್ನು ಹುಡ್ಕೊ ಸಂಸ್ಥೆಗೆ ನೀಡಿದೆ ಎನ್ನುತ್ತಾರೆ. ಪ್ರಶಸ್ತಿ ಬಗ್ಗೆ ಟೀಕಿಸುವ ಶಾಸಕರು ತಮ್ಮ ಅವಧಿಯಲ್ಲಿನ ಮನೆಗಳ ಸ್ಥಿತಿಗಳು ಯಾವ ಮಟ್ಟದಲ್ಲಿವೆ ಎಂದು ತೋರಿಸಲಿ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದರೆ ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ತರಬಹುದು. ಆದರೆ, ಈ ನಿರ್ಧಾರ ಪಕ್ಷದ ನೇತಾರ ಶ್ರೀರಾಮುಲು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಏಕಾಂಬರೇಶ್ ನಾಯ್ಕ, ಕುಪ್ಪಿನಕೆರೆ ವೆಂಕಟೇಶ್, ಹನುಮಾನಾಯ್ಕ, ಬಂಗಾರಿ ಮಂಜುನಾಥ, ಅಂಜಿನಿ, ಎಂ.ಜೆ.ಯಮುನಪ್ಪ, ಎಚ್.ಇಮಾಂಸಾಬ್, ನಜೀರ್, ವೆಂಕಟೇಶ್, ಸೋಮಪ್ಪ, ಸ್ವಾಮಿ, ಎರಿಸ್ವಾಮಿ, ಇಕ್ಬಾಲ್, ರಹಿಂ, ಬಸವರಾಜ, ಕೆ.ಟಿ.ಹುಲುಗಪ್ಪ, ಜಿಂದಿಗೆಸಾಬ್, ಗ್ರಾ.ಪಂ.ಸದಸ್ಯರಾದ ರುದ್ರಪ್ಪ, ಲಿಂಬ್ಯಾನಾಯ್ಕ, ಲಕ್ಷ್ಮಣ, ಅಂಕ್ಲೇಶ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.